ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಜೋಳದಡಗಿ ಬ್ಯಾರೇಜಿನ ಕೆಳಭಾಗದ ನದಿಪಾತ್ರದಲ್ಲಿ ನೀರು ಬತ್ತಿದ ಪರಿಣಾಮ, ಸಾವಿರಾರು ಮೀನುಗಳು ಉಸಿರು ಚೆಲ್ಲಿ ದಡದಲ್ಲಿ ನಿಶ್ಚೆಲವಾಗಿ ಬಿದ್ದಿವೆ. ನದಿಪಾತ್ರದಿಂದ ಕೂಗಳತೆ ದೂರದಲ್ಲಿರುವ ಗ್ರಾಮಗಳಲ್ಲಿ ದುರ್ನಾತಕ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ.
ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜೋಳದಡಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಕೆಳವ್ಯಾಪ್ತಿಯ ಸೂಗೂರು, ಕೊಂಗಂಡಿ, ಅಗ್ನಿಹಾಳ್ ಹಾಗೂ ಗುಂಡ್ಲೂರು ಗ್ರಾಮಗಳಲ್ಲಿ ಇಂತಹ ಸಮಸ್ಯೆ ಕಣ್ಣಿಗೆ ರಾಚುತ್ತದೆ. ಬ್ಯಾರೇಜಿನಿಂದ ನೀರು ಬಿಡದಿರುವುದು ಹಾಗೂ ಆಹಾರ ಸಮಸ್ಯೆ ಕಾರಣಕ್ಕೆ ನದಿಯಲ್ಲಿದ್ದ ಜಲಚರಗಳು, ಸಾವಿರಾರು ಮೀನುಗಳು ದಡದಲ್ಲಿ ರಾಶಿಗಟ್ಟಲೇ ಸತ್ತುಬಿದ್ದಿವೆ.ಒಣಗುತ್ತಿರುವ ನೂರಾರು ಎಕರೆ ಭತ್ತದ ಬೆಳೆ
ಬ್ಯಾರೇಜ್‌ನಿಂದ ಬಿಡುವ ನೀರಿನ ಪ್ರಮಾಣ ಅವಲಂಬಿಸಿ ಭತ್ತ ಬಿತ್ತನೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕುಡಿಯುವ ನೀರಿನ ಅಭಾವ ಸಾಧ್ಯತೆ ಅಂದಾಜಿನಿಂದಾಗಿ ಮುಂಜಾಗ್ರತಾ ಕ್ರಮವಾಗಿ ಬ್ಯಾರೇಜಿನ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿ ಆದೇಶಿಸಿದ ಜಿಲ್ಲಾಡಳಿತ, ಕುಡಿಯುವ ನೀರಿಗಾಗಿ ಸಂಗ್ರಹ ಮಾಡಿದೆ.
ಬ್ಯಾರೇಜ್‌ನಲ್ಲಿ ನೀರಿದ್ದು ಸರ್ಕಾರ ನೀರು ಬಿಡಬಹುದೆಂಬ ಲೆಕ್ಕಾಚಾರದ ಮೇಲೆ ರೈತರು ಬಿತ್ತನೆ ಮಾಡಿದ್ದಾರೆ. ಹಾಗೇ ನೋಡಿದರೆ ಈ ಅವಧಿಯಲ್ಲಿ ನಿಷೇಧವಿದೆ. ಆದರೂ, ಸರ್ಕಾರದ ನಿರ್ಧಾರ ಬದಲಾಗಬಹುದು ಎಂದು ನಿರೀಕ್ಷಿಸಿ ರೈತರು ಭತ್ತ ಬೆಳೆದಿದ್ದಾರೆ. ಪೈರು ಕಟಾವಿಗೆ ಬರುವ ಹಂತದಲ್ಲಿ ಬ್ಯಾರೇಜ್ ಗೇಟ್‌ಗಳನ್ನು ಹಾಕುವ ಮೂಲಕ ಕೆಳಗಡೆ ಪ್ರದೇಶಕ್ಕೆ ನೀರು ಇಲ್ಲದಂತಾಗಿ ಬೆಳೆ ಬಾಡುತ್ತಿವೆ. ಆತಂಕದಲ್ಲಿರುವ ರೈತರು ನೀರು ಬಿಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಜೋಳದಡಗಿ ಬ್ಯಾರೇಜಿನ ಮೂಲಕ ಕೆಳಭಾಗದ ಪ್ರದೇಶದ ನದಿಪಾತ್ರಕ್ಕೆ ನೀರು ಹರಿಸಿದರೆ ಜಲಚರಗಳು ಬದುಕುವ ಜೊತೆಗೆ, ರೈತರ ಭತ್ತದ ಬೆಳೆ ಒಣಗುವುದನ್ನು ತಡೆಯಬಹುದು. ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಮಾಡಿದ್ದೇವೆ. ರೈತರ ಹಿತದೃಷ್ಟಿಯಿಂದ ನೀರು ಬಿಡಲಿ.