ಮೊದಲಿನ ಮತ್ತು ಈಗಿನ ಶಿಕ್ಷಣ ಸಂಸ್ಥೆಗಳ ನಡುವಿನ ವಿಚಾರಧಾರೆಗಳು ಭಿನ್ನವಾಗಿವೆ. ಈಗಿನ ಶಿಕ್ಷಣ ವ್ಯವಸ್ಥೆಯಿಂದ ರೈತರ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ. ರೈತರ ಮಕ್ಕಳನ್ನೇ ಹುಡ್ಕೊಂಡು ಬಂದು ಕನ್ಯೆ ಕೊಡುವ ದಿನಮಾನವೂ ದೂರವಿಲ್ಲ.
ಕನ್ನಡಪ್ರಭ ವಾರ್ತೆ ನರಗುಂದ
ಮೊದಲಿನ ಮತ್ತು ಈಗಿನ ಶಿಕ್ಷಣ ಸಂಸ್ಥೆಗಳ ನಡುವಿನ ವಿಚಾರಧಾರೆಗಳು ಭಿನ್ನವಾಗಿವೆ. ಈಗಿನ ಶಿಕ್ಷಣ ವ್ಯವಸ್ಥೆಯಿಂದ ರೈತರ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ. ರೈತರ ಮಕ್ಕಳನ್ನೇ ಹುಡ್ಕೊಂಡು ಬಂದು ಕನ್ಯೆ ಕೊಡುವ ದಿನಮಾನವೂ ದೂರವಿಲ್ಲ. ರೈತರನ್ನ ಕಡೆಗಣಿಸಿದರೆ ಅನ್ನ-ನೀರು ಸಿಗದ ಪರಿಸ್ಥಿತಿ ಬರಲಿದೆ. ಕೆಇಎಸ್ ಶಾಲೆಯಲ್ಲಿ ನೈತಿಕ ಮೌಲ್ಯವುಳ್ಳ ಶಿಕ್ಷಣ ಪಡೆದ ಮಕ್ಕಳಿದ್ದ ಕಾರಣ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಶಾಸಕರ ಅನುದಾನ ನೀಡುತ್ತೇನೆಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಶನಿವಾರ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿನ ಕೆಇಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ವಜ್ರ ಮಹೋತ್ಸವ ಸಮಾರಂಭ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ಉತ್ತರದಲ್ಲಿ ಶೇ.70ರಷ್ಟು ಖಾಸಗಿ ಶಾಲೆಗಳಿವೆ. ಮಠಮಾನ್ಯಗಳೇ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿವೆ. ಹುಟ್ಟಿ ಸಾಯೋದರೊಳಗೆ ಪ್ರತಿಯೊಬ್ಬರು ಹೆಜ್ಜೆಗುರುತು ಬಿಟ್ಟು ಹೋಗಬೇಕು ಎಂದು ಹೇಳಿದರು.
ಸಂಸದ ಪಿ.ಸಿ. ಗದ್ದಿಗೌಡ್ರ ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ಬದುಕಿಗೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಿ. ಈ ಸಂಸ್ಥೆಯ ಅಭಿವೃದ್ಧಿಗೆ ಸಂಸದರ ಅನುದಾನದಲ್ಲಿ ರೂ.5 ಲಕ್ಷ ನೀಡುವೆ ಎಂದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಬ್ರಿಟಿಷರ ಕರಿಛಾಯೆ ಇದ್ದ ಸಂದರ್ಭ 1965ರಲ್ಲಿ ಈ ಶಾಲೆ ಪ್ರಾರಂಭವಾಗಿದೆ. ಶಾಲೆ ಸೌಂದರ್ಯ ಹೆಚ್ಚಾಗಲು ಮುಂಭಾಗದಲ್ಲಿನ ಹಳೆಯ ಕಟ್ಟಡಗಳು ಇರಬಾರದು. ಶಾಲಾ ಕಂಪೌಂಡ್ ಸೇರಿದಂತೆ ಇತರೇ ಅಭಿವೃದ್ಧಿ ಕಾರ್ಯಗಳಿಗೆ ₹10 ಲಕ್ಷ ಶಾಸಕರ ಅನುದಾನ ನೀಡುವೆ ಎಂದರು.
ಹಳೆಯ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ನಿವೃತ್ತಿಗೊಂಡ ಪ್ರಾಚಾರ್ಯರು, ಶಿಕ್ಷಕರು ಆಗಮಿಸಿದ್ದರು.
ಕೆಇಎಸ್ ಶಾಲೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಕೊಣ್ಣೂರ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಶ್ರೀಗಳು, ವಿರಕ್ತಮಠದ ಚೆನ್ನವೀರೇಶ್ವರ ಶ್ರೀಗಳು, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜುಗೌಡ ಕೆಂಚನಗೌಡ್ರ, ನಿವೃತ್ತ ಪ್ರಾಚಾರ್ಯ ಎಸ್.ಕೆ. ಜೋಶಿ, ಬಿ.ಎಂ. ಬೆಳಹಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಟಿ. ಚೌಡರಡ್ಡಿ, ಎನ್.ಆರ್. ಪುರಂದರೆ, ಎಸ್.ಆರ್. ನಾಯಕ, ಎಂ.ಟಿ. ಮಲ್ಲನಗೌಡ್ರ, ಬಿ.ವ್ಹಿ. ಚಿಂದಿ, ಜೆ.ಎನ್. ಮಠ, ಎಸ್.ಟಿ. ಯಲಿಗಾರ, ಎನ್.ಕೆ. ಸೋಮಾಪೂರ, ಎನ್.ಟಿ. ಕೆಂಪನಗೌಡ್ರ, ಎಸ್.ವಿ. ಪಾಟೀಲ, ಆರ್.ಟಿ. ಅಣ್ಣಿಗೇರಿ, ಬಸಪ್ಪ ಮರ್ಚಪ್ಪನವರ, ಇಸಾಕ ಮಸೂತಿಮನಿ, ಎಸ್.ಬಿ. ಹೂಲಗೇರಿ, ಎಸ್.ಪಿ. ಯಲ್ಲಪ್ಪಗೌಡ್ರ, ಪ್ರಾಚಾರ್ಯ ಕೆ.ಎಂ. ಮಾಕಣ್ಣವರ, ಶಿವಪ್ಪಯ್ಯನಮಠ, ಶಿಕ್ಷಕರು, ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.