ಮುಂಡರಗಿ: ತಾಲೂಕಿನ ಗಂಗಾಪುರ ಬಳಿ ಇರುವ ವಿಜಯನಗರ ಶುಗರ್ಸ್ ಅವರು ಕೊಪ್ಪಳ ಭಾಗದ ರೈತರಿಗೆ ಒಂದು ಟನ್ ಕಬ್ಬಿಗೆ 2800 ರು.ಗಳನ್ನು ಕೊಟ್ಟಿದ್ದು, ಮುಂಡರಗಿ ಭಾಗದ ರೈತರಿಗೆ 2565 ರು.ಗಳನ್ನು ನೀಡುವ ಮೂಲಕ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಈ ವರ್ಷ ನಮಗೂ 2800 ದರ ನೀಡಬೇಕು. ನೀಡದಿದ್ದರೆ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರ.ಕಾರ್ಯದರ್ಶಿ ಶಿವಾನಂದ ಇಟಗಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಇವರ ಅಧ್ಯಕ್ಷತೆಯಲ್ಲಿ ರೈತರ ಬೇಡಿಕೆಗಳ ಈಡೇರಿಕೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಜಯನಗರ ಶುಗರ್ಸ್ ಆಡಳಿತ ಮಂಡಳಿ ಜನರಲ್ ಮ್ಯಾನೇಜರ್ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಪ್ರತಿ ಟನ್ ಕಬ್ಬಿಗೆ 2800 ರು.ಗಳನ್ನು ನಾವು ನೀಡಿಲ್ಲ. ನಮ್ಮಲ್ಲಿ ಪ್ರತಿ ಟನ್ ಕಬ್ಬಿಗೆ 2565 ರು.ಗಳನ್ನು ನಿಗದಿ ಮಾಡಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.ತಾವು 2800 ರು.ಗಳನ್ನು ನೀಡಿರುವುದಾಗಿ ನಮಗೆ ರೈತರಿಂದಲೇ ಮಾಹಿತಿ ಬಂದಿದ್ದು, ತಾವು ಈ ದರ ನೀಡಿಲ್ಲ ಎಂದು ವಾದಿಸಿದರೆ ನಾವು ಕೊಪ್ಪಳದ ರೈತರನ್ನೇ ಕರೆಯಿಸಿ ಮಾತನಾಡಿಸುತ್ತೇವೆ. ಆವಾಗಲಾದರೂ ನಿಜ ಹೇಳುತ್ತೀರಾ ಎಂದು ಶಿವಾನಂದ ಇಟಗಿ ಪ್ರಶ್ನಿಸಿದರು. ಆದರೆ ಕಾರ್ಖಾನೆಯವರು ತಾವು ಹೆಚ್ಚುವರಿ ಹಣ ನೀಡಿಲ್ಲವೆಂದು, ಅಲ್ಲದೇ ತಾವು ರೈತರ ಖಾತೆಗೆ ನೇರವಾಗಿ ಹಣ ಹಾಕಿದ್ದು, ದಾಖಲೆ ಪರಿಶೀಲಿಸುವಂತೆ ತಿಳಿಸಿದರು. ತಾವು ಕೊಪ್ಪಳ ಭಾಗದ ರೈತರಿಗೆ ಹೆಚ್ಚುವರಿ ಹಣ ನೀಡಿರುವ ಕುರಿತು ದಾಖಲೆ ಪ್ರದರ್ಶಿಸುವುದಾಗಿ ರೈತರು ಹೇಳಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ತಹಸೀಲ್ದಾರ್ ಕಾರ್ಖಾನೆಯವರಿಗೆ ಸೂಚಿಸಿದರು.
ನಂತರ ಸಿಂಗಟಾಲೂರ ಏತ ನೀರಾವರಿ ಯೋಜನೆಯಲ್ಲಿ ರೈತ ಜಮೀನುಗಳಿಗೆ ನೀರು ಕೊಡಲು ಈಗಾಗಲೇ ಹನಿ ನೀರಾವರಿ ಯೋಜನೆ ಜಾರಿಗೊಳಿದ್ದು ಅದು ಇದುವರೆಗೂ ಯಶಸ್ವಿಯಾಗಿ, ಯಾವೊಬ್ಬ ರೈತರ ಜಮೀನಿಗೂ ನೀರು ಬಳಕೆಯಾಗುತ್ತಿಲ್ಲ. ಎಲ್ಲೆಡೆ ಕಳಪೆ ಕಾಮಗಾರಿಯಾಗಿರುವುದು ಕಂಡು ಬರುತ್ತಿದ್ದು, ಕಾಲುವೆ ಮುಖಾಂತರವೇ ನಮ್ಮ ಜಮೀನುಗಳಿಗೆ ನೀರು ಒದಗಿಸಬೇಕೆಂದು ರೈತರು ಏತ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ಸಂದರ್ಭದಲ್ಲಿ ಹೆಸರೂರು ರೈತ ಶರಣಪ್ಪ ಚೆನ್ನಳ್ಳಿ ಮಾತನಾಡಿ, ಹನಿ ನೀರಾವರಿಯಿಂದ ರೈತರ ಜಮೀನುಗಳಿಗೆ ನೀರಂತೂ ಹರಿಯಲಿಲ್ಲ. ಆದರೆ ಈ ಯೋಜನೆಗೆ ಸಾವಿರಾರು ಕೋಟಿ ಹಣವಂತೂ ಹರಿದು ಬಂದಿದೆ. ಆದರೆ ಇದುವರೆಗೂ ರೈತರ ಜಮೀನುಗಳಿಗೆ ಮಾತ್ರ ನೀರು ಹರಿದು ಬಂದಿಲ್ಲ. ಆದ್ದರಿಂದ ನಮಗೆ ಕಾಲುವೆ ಮುಖಾಂತರವೇ ನೀರು ಕೊಡಿ ಎಂದು ಒತ್ತಾಯಿಸಿದರು. ಈ ವೇಳೆ ಶಿವಾನಂದ ಇಟಗಿ ಮಾತನಾಡಿ, ಹನಿ ನೀರಾವರಿಯ ಯೋಜನೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಲುವೆ ಮುಖಾಂತರವೇ ರೈತರ ಜಮೀನುಗಳಿಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಅನೇಕ ರೈತರು ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವಾಗ 17ಕ್ಕೂ ಹೆಚ್ಚು ಮಾಹಿತಿಯನ್ನು ಕೇಳುತ್ತಿದೆ. ಇದರಿಂದ ಸಾಲಕ್ಕಾಗಿ ಬ್ಯಾಂಕುಗಳಿಗೆ ಅಲೆದು ಸಾಕಾಗಿದೆ. ರೈತರು ಸಾಲ ಮರುಪಾವತಿಸಲು ಅಥವಾ ರಿನಿವಲ್ ಮಾಡಲು ಬ್ಯಾಂಕಿಗೆ ಹೋದರೂ ಸಹ ಬ್ಯಾಂಕಿನ ಅಧಿಕಾರಿಗಳು ನಾಳೆ ಬಾ -ನಾಡಿದ್ದು ಬಾ ಎಂದು ಅಲೆದಾಡಿಸುತ್ತಿದ್ದಾರೆ. ಇದರಿಂದ ರೈತ ಸಮೂದಾಯಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಅದನ್ನು ಸರಳೀಕರಿಸಬೇಕೆಂದು ರೈತರು ಒತ್ತಾಯಿಸಿದರು.ಸಭೆಯಲ್ಲಿ ಹಾಜರಿದ್ದ ಅನೇಕ ಬ್ಯಾಂಕುಗಳ ವ್ಯವಸ್ಥಾಪಕರ ಪರವಾಗಿ ಗದಗ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ. ಮಾತನಾಡಿ ಒಂದೊಂದು ಬ್ಯಾಂಕುಗಳಲ್ಲಿ ಒಂದೊಂದು ನಿಯಮಗಳಿರುತ್ತವೆ. ಆದರೂ ರೈತರ ಅನಕೂಲಕ್ಕಾಗಿ ಅದನ್ನು ಮತ್ತಷ್ಟು ಸರಳೀಕರಿಸಲಾಗುವುದು. ಸಾಲ ಮರುಪಾವತಿ ಹಾಗೂ ರಿನಿವಲ್‌ಗೆ ರೈತರು ಬ್ಯಾಂಕಿಗೆ ಬಂದಾಗ ಕೂಡಲೇ ಸ್ಪಂದಿಸಬೇಕು ಎಂದು ಎಲ್ಲ ಬ್ಯಾಂಕ್ ವ್ಯವಸ್ಥಾಪಕರಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದರು. ಬ್ಯಾಂಕಿನ ನಿಯಮಗಳು ಎಲ್ಲರಿಗೂ ಅರ್ಥವಾಗುವ ಉದ್ದೇಶದಿಂದ ಕನ್ನಡ, ಹಿಂದಿ ಮತ್ತು ಇಂಗ್ಲಿಷ ಮೂರು ಭಾಷೆಯಲ್ಲಿ ಮುದ್ರಿಸಲಾಗುವುದು ಎಂದು ಹೇಳಿದರು.ಗ್ರಾಮೀಣ ಸ್ವಉದ್ಯೋಗ ಯೋಜನೆಯ ಅಡಿಯಲ್ಲಿ 18ರಿಂದ 40 ವರ್ಷದ ಎಲ್ಲ ರೈತರಿಗೆ ಹುಲಕೋಟಿಯಲ್ಲಿ ತರಬೇತಿ ನಡೆಯುತ್ತಿದೆ. ಇದರ ಲಾಭ ಪಡೆದು ಸ್ವ ಉದ್ಯೋಗಿಗಳಾಗಬೇಕೆಂದು ಸಲಹೆ ನೀಡುತ್ತಿದ್ದಂತೆ ನಾನು ತರಬೇತಿ ಪಡೆದಿದ್ದೇನೆ, ಆದರೆ ಸ್ವ ಉದ್ಯೋಗ ಮಾಡಲು ಬ್ಯಾಂಕಿನವರು ಸಾಲ ನೀಡುತ್ತಿಲ್ಲ ಎಂದು ಸಭೆಯಲ್ಲಿದ್ದ ಯುವ ರೈತರೊಬ್ಬರು ದೂರಿದರು. ರೈತರು ಸಾಲ ಕೇಳಿದರೆ ಬ್ಯಾಂಕಿನವರು ಕೂಡಲೇ ಸ್ಪಂದಿಸಬೇಕು. ಸ್ಪಂದಿಸದಿದ್ದರೆ ರೈತರು ನನಗೆ ದೂರು ನೀಡಬೇಕು ಎಂದು ಗದಗ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ. ತಿಳಿಸಿದರು.
ಸಭೆಯಲ್ಲಿ ರೈತರಾದ ಚಂದ್ರಕಾಂತ ಉಳ್ಳಾಗಡ್ಡಿ, ಶರಣಪ್ಪ ಜಂತ್ಲಿ, ಅಶ್ವಿನಿ ಗೌಡರ, ದ್ಯಾಮಣ್ಣ ವಾಲಿಕಾರ, ವೀರೇಶ ಶಾಸ್ತ್ರಿ, ಅಶೋಕ ಬನ್ನಿಕೊಪ್ಪ, ಭೀಮೇಶ ಬಂಡಿವಡ್ಡರ, ಚಂದ್ರಪ್ಪ ಗದ್ದಿ, ಚಂದ್ರಪ್ಪ ಬಳ್ಳಾರಿ, ಹುಚ್ಚಪ್ಪ ಹಂದ್ರಾಳ, ಗರಡಪ್ಪ ಜಂತ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.