- ಹರಿಹರದಲ್ಲಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆಯಲ್ಲಿ ಹಾಳೂರು ನಾಗರಾಜ್ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಹರಿಹರ
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ವರ್ತನೆ ಖಂಡಿಸಿ ಬುಧವಾರ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ನಗರದ ಶಿವಮೊಗ್ಗ ರಸ್ತೆಯ ಪಕ್ಕಿರಸ್ವಾಮಿ ಮಠದಿಂದ ಆರಂಭವಾದ ಮೆರವಣಿಗೆಯು ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮುಖ್ಯ ರಸ್ತೆ ಮೂಲಕ ಗಾಂಧಿ ವೃತ್ತಕ್ಕೆ ಆಗಮಿಸಿತು. ಕೆಲ ನಿಮಿಷ ಮಾನವ ಸರಪಳಿ ನಿರ್ಮಿಸಿ, ಆಕ್ರೋಶ ವ್ಯಕ್ತಪಡಿಸಿದ ರೈತರು, ತಾಲೂಕು ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಭದ್ರಾ ಅಣೆಕಟ್ಟಿನಲ್ಲಿ ಬೇಸಿಗೆ ಹಂಗಾಮಿಗೆ ಸಾಕಷ್ಟು ನೀರು ಸಂಗ್ರಹವಿದೆ. ಕೊನೆ ಭಾಗದ ಜಮೀನಿಗೆ ನೀರು ಕೊಡುವಲ್ಲಿ ನೀರಾವರಿ ಇಲಾಖೆ ವಿಫಲವಾಗಿದೆ. ರೈತರಿಗೆ ನೀರು ಕೊಡದಿರುವ ಜಮೀನುಗಳನ್ನು ಸರ್ವೆ ಮಾಡಿ, ಆ ರೈತರಿಗೆ ಪರಿಹಾರ ಒದಗಿಸಿಕೊಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಸರ್ವೆ ಇಲಾಖೆಯ ಎಡಿಎಲ್‌ಆರ್ ನಾಗಭೂಷಣ ಮಾತನಾಡಿ, ಮೇ ೫ರಂದು ರೈತ ಮುಖಂಡರ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು. ತಾಪಂ ಇಒ ಸುಮಲತಾ ಅವರು ಪಿಡಿಒಗಳ ವಿರುದ್ಧದ ಆರೋಪಗಳ ಬಗ್ಗೆ ಲಿಖಿತ ರೂಪದಲ್ಲಿ ದೂರನ್ನು ನೀಡುವಂತೆ ಹೇಳಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಹಲಸಬಾಳು ಬಸವರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಬಿ. ನಂದೀಶ್ ನಂದಿತಾವರೆ, ಮುಖಂಡರಾದ ಪರಮೇಶ್ವರಪ್ಪ ನಂದಿತಾವರೆ, ರಾಘವೇಂದ್ರ, ಪರಮೇಶ್ವರಪ್ಪ ಕೆಂಚನಹಳ್ಳಿ, ಪರಮೇಶ್ವರಪ್ಪ ಭಾನುವಳ್ಳಿ, ರಂಗಣ್ಣ ಹಾಲಿವಾಣ, ಗದಿಗೆಪ್ಪ ಗೋವಿನಹಾಳ್, ಕೆ.ವಿ.ರುದ್ರಮುನಿ, ಪರಶುರಾಮಪ್ಪ ರಾಜನಹಳ್ಳಿ, ಕೆ.ಜಿ.ನಾಗಪ್ಪ, ಕೆ.ಎಚ್.ಮಾಲತೇಶ್ ಹಾಗೂ ಇತರರಿದ್ದರು.
-16ಎಚ್‍ಆರ್‍ಆರ್1-2: