ಸ್ವಾತಂತ್ರ್ಯ ನಂತರ ಗಾಂಧೀಜಿ 5 ವರ್ಷ ಬದುಕಿದ್ದರೆ ಭಾರತ ಮದ್ಯಪಾನ ಮುಕ್ತ: ವಿವೇಕ್ ವಿನ್ಸೆಂಟ್ ಪಾಯಸ್

KannadaprabhaNewsNetwork | Published : Oct 7, 2024 1:36 AM

ಸಾರಾಂಶ

ಗಾಂಧೀಜಿ ಅವರು ನಾನೇನಾದರೂ ದೇಶದ ಸರ್ವಾಧಿಕಾರಿಯಾದರೆ ಮದ್ಯಪಾನ ನಿಷೇಧಿಸುತ್ತೇನೆ. ಮದ್ಯಪಾನದ ತೆರಿಗೆ ಹಣದಿಂದ ಸರಕಾರ ನಡೆಸಿದರೆ ಅದೊಂದು ಪಾಪದ ಸರಕಾರ ಎಂದು ಹೇಳಿದ್ದರು. ಈ ಬಗ್ಗೆ ಯಾವುದೇ ಸರಕಾರಗಳು ಯೋಚಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸ್ವಾತಂತ್ರ್ಯ ನಂತರ ಮಹಾತ್ಮ ಗಾಂಧೀಜಿ ಕೇವಲ ಐದು ವರ್ಷಗಳ ಕಾಲ ಬದುಕಿದಿದ್ದರೆ ಸಾಕಿತ್ತು, ಭಾರತ ಮದ್ಯಪಾನ ಮುಕ್ತ ರಾಷ್ಟ್ರವಾಗುತ್ತಿತ್ತು ಎಂದು ಧರ್ಮಸ್ಥಳ ಸಂಸ್ಥೆ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಂಗವಾಗಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ, ಜನಜಾಗೃತಿ ಜಾಥಾ ಮತ್ತು ಪಾನಮುಕ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಗಾಂಧೀಜಿ ಅವರು ನಾನೇನಾದರೂ ದೇಶದ ಸರ್ವಾಧಿಕಾರಿಯಾದರೆ ಮದ್ಯಪಾನ ನಿಷೇಧಿಸುತ್ತೇನೆ. ಮದ್ಯಪಾನದ ತೆರಿಗೆ ಹಣದಿಂದ ಸರಕಾರ ನಡೆಸಿದರೆ ಅದೊಂದು ಪಾಪದ ಸರಕಾರ ಎಂದು ಹೇಳಿದ್ದರು. ಈ ಬಗ್ಗೆ ಯಾವುದೇ ಸರಕಾರಗಳು ಯೋಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮದ್ಯಪಾನ, ಹಲವು ದುಶ್ಚಟಗಳಲ್ಲಿ ಭಾರತ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ವೈನ್‌ಶಾಪ್‌ಗಳು ಇರುವಷ್ಟು ದೇವಸ್ಥಾನ, ಮಸೀದಿ, ಚರ್ಚ್, ಶಾಲೆಗಳೂ ಇಲ್ಲ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಹೆಣ್ಣುಮಕ್ಕಳು ಡ್ರಗ್ಸ್ ಪೆಡ್ಲರ್‌ಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ನಮ್ಮ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರಗಳು ಇರುತ್ತವೆ. ಸರಿಯಾಗಿ ಅರ್ಥೈಸಿಕೊಂಡು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರೆ ಅರ್ಧ ಸಮಸ್ಯೆ ಅಲ್ಲಿಯೇ ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ತಾಪಂ ಆವರಣದಿಂದ ವಿವಿಧ ಕಲಾತಂಡಗಳೊಂದಿಗೆ ಹೊರಟ ಗಾಂಧಿಸ್ಮೃತಿ, ಜನಜಾಗೃತಿ ಜಾಥಾಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದ ಕಾರ್‍ಯಕ್ರಮಕ್ಕೆ ಶುಭಹಾರೈಸಿದರು. ಮಧ್ಯವರ್ಜನ ಶಿಬಿರದ ಮೂಲಕ ಹೊಸಬದುಕು ಕಟ್ಟಿಕೊಂಡ ಹಲವು ಮಂದಿಯನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಉಪಾಧ್ಯಕ್ಷ ಅಶ್ವತ್ಥ್ ಕುಮಾರೇಗೌಡ, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಎಲ್.ಮುರುಳಿಧರ್, ಕಾನೂನು ಸಲಹೆಗಾರೆ ಪವಿತ್ರ ಶ್ರೀಧರ್, ಎಸ್.ಎ.ಮಲ್ಲೇಶ್, ಯೋಜನಾಧಿಕಾರಿಗಳಾದ ಸರೋಜ, ಎಸ್.ಯಶ್ವಂತ್ ಸೇರಿ ಜನಜಾಗೃತಿ ವೇದಿಕೆ ಸದಸ್ಯರು ಭಾಗವಹಿಸಿದ್ದರು.

Share this article