ಧಾರವಾಡ: ನನಗೆ ಮರು ಜನ್ಮ ಇದ್ದರೆ ಕನ್ನಡದ ನೆಲದಲ್ಲಿ ಜನಿಸಲು ಬಯಸುವೆ ಎಂದು ಪುಣೆಯ ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಸುಹಾಸ್ ವ್ಯಾಸ ಇಚ್ಚಿಸಿದರು.
ಸ್ವರ ಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪಂ. ಬಸವರಾಜ ರಾಜಗುರು ಅವರ 105ನೇ ಜನ್ಮದಿನಾಚರಣೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಕರ್ನಾಟಕಕ್ಕೆ ಸುಮಧುರ ಕಂಠ ಕೊಡುಗೆಯಾಗಿ ಬಂದಿದೆ. ಇಲ್ಲಿಯ ಮಣ್ಣಿನ ಗುಣದಿಂದ ಖ್ಯಾತನಾಮ ಸಂಗೀತಗಾರರು ಇಲ್ಲಿ ಜನಿಸಿದ್ದಾರೆ. ಈ ಪೈಕಿ ಪಂ. ಬಸವರಾಜ ರಾಜಗುರು ಪ್ರಮುಖರು. ನನ್ನ ಬಾಲ್ಯದ ಸಮಯದಿಂದಲೂ ರಾಜಗುರು ಅವರನ್ನು ನೋಡಿದ್ದು, ಅದ್ಭುತ ಕಂಠ ಹೊಂದಿದವರು. ಬರೀ ಗಾಯಕರಲ್ಲದೇ ಗುರುಗಳು ಸಹ. ಇದೀಗ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿದ್ದು ಹೆಮ್ಮೆ ಎನಿಸುತ್ತಿದೆ ಎಂದರು.
ಪಂ. ರಾಜಗುರು ತಾವಷ್ಟೇ ಬೆಳೆಯಲಿಲ್ಲ ಶಿಷ್ಯರನ್ನು ಬೆಳೆಸಿದರು. ಅವರ ಶಿಷ್ಯಂದಿರು ಖ್ಯಾತ ಕಲಾವಿದರಾಗಿ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.ಇದೇ ವೇಳೆ ಉದಯೋನ್ಮುಖ ಕಲಾವಿದರಾದ ಧಾರವಾಡದ ವೀಣಾ ಮಠ ಹಾಗೂ ರಾಯಚೂರಿನ ಚಿದಂಬರ ಜೋಶಿ ಅವರಿಗೆ ''''ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪ್ರಶಸ್ತಿ'''' ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯುವ ಕಲಾವಿದರು, ಪ್ರಶಸ್ತಿ ದೊರೆತಿರುವುದು ನಮ್ಮ ಪುಣ್ಯ. ಪ್ರಶಸ್ತಿಯಿಂದಾಗಿ ಜವಾಬ್ದಾರಿ ಹೆಚ್ಚಾಗಿದ್ದು, ಸಾಧನೆ ಮಾಡುವುದಕ್ಕೆ ಪ್ರೇರಣೆಯಾಗಿದೆ ಎಂದರು.
ಇದಕ್ಕೂ ಮೊದಲ ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಸದಸ್ಯ ನಿಜಗುಣ ರಾಜಗುರು, ಟ್ರಸ್ಟ್ ಆರಂಭವಾದಾಗಿನಿಂದ ಖ್ಯಾತ ಸಂಗೀತ ಕಲಾವಿದರಿಗೆ ರಾಷ್ಟ್ರೀಯ ಹಾಗೂ ಯುವ ಕಲಾವಿದರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಲಾಗಿದೆ. ಪಂ. ಬಸವರಾಜ ರಾಜಗುರು ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಗೀತ ಕಲಿಸಿದ ಮಹಾಗುರು. ಅವರ ಪರಂಪರೆಯನ್ನು ಅವರ ಶಿಷ್ಯರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಧಾರವಾಡದಲ್ಲಿ ಪಂ. ಬಸವರಾಜ ರಾಜಗುರು ಅವರ ಸ್ಮಾರಕ ಭವನ ನಿರ್ಮಾಣವಾಗಬೇಕು. ಅವರ ಎಲ್ಲ ಕಾರ್ಯಕ್ರಮಗಳು ಅಲ್ಲಿ ನಡೆಸಬೇಕು. ಅನುದಾನ ಹಾಗೂ ಸ್ಥಳ ನಿಗದಿಯಾಗಿದೆ. ಆದರೂ ಕಾರ್ಯಾರಂಭ ಆಗದಿರುವುದು ಬೇಸರ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.ಟ್ರಸ್ಟ್ ಅಧ್ಯಕ್ಷ ಪಂ. ಕೈವಲ್ಯಕುಮಾರ ಗುರುವ, ಸದಸ್ಯರಾದ ಡಾ. ಅಶೋಕ ಹುಗ್ಗಣ್ಣವರ, ಅನಿಲ್ ಮೈತ್ರಿ, ಅಲ್ಲಮಪ್ರಭು ಕಡಕೋಳ, ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಭಾರತಿದೇವಿ ರಾಜಗುರು ವೇದಿಕೆಯಲ್ಲಿದ್ದರು. ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳು ಪ್ರಾರ್ಥಿಸಿದರು. ನಂತರ ಪ್ರಶಸ್ತಿ ಪುರಸ್ಕೃತರಿಂದ ಸಂಗೀತ ಕಾರ್ಯಕ್ರಮ ಜರುಗಿತು.