ಅಕ್ರಮ ಸಾಬೀತುಪಡಿಸಿದರೆ ರಾಜೀನಾಮೆ: ಹೊರಟ್ಟಿ ಸವಾಲು

KannadaprabhaNewsNetwork |  
Published : Dec 09, 2025, 01:00 AM IST
ಬಸವರಾಜ ಹೊರಟ್ಟಿ | Kannada Prabha

ಸಾರಾಂಶ

ವಿಧಾನಪರಿಷತ್‌ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿದ್ದೇನೆಂಬ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ ಒಂದು ಕ್ಷಣವೂ ಈ ಕುರ್ಚಿಯಲ್ಲಿ ಕುಳಿತುಕೊಳ್ಳದೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ, ಸುವರ್ಣಸೌಧ

ವಿಧಾನಪರಿಷತ್‌ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿದ್ದೇನೆಂಬ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ ಒಂದು ಕ್ಷಣವೂ ಈ ಕುರ್ಚಿಯಲ್ಲಿ ಕುಳಿತುಕೊಳ್ಳದೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ವಿಧಾನ ಪರಿಷತ್ತಿನ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅವರ ಆರೋಪಕ್ಕೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಕಳೆದ 45 ವರ್ಷದಿಂದ ನಾನು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೂಲಕ ನಡೆಸಿದ್ದೇವೆ. ಕೆಇಎ ನೀಡಿದ ಅರ್ಹತಾ ಪಟ್ಟಿಯ ಆಧಾರದಲ್ಲಿ ಸಮಿತಿಯೊಂದನ್ನು ರಚಿಸಿ ನೇಮಕಾತಿ ಮಾಡಿದ್ದೇವೆ. ಇದರಲ್ಲಿ ಯಾವುದೇ ಲೋಪ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.ನನ್ನ ಮೇಲೆ ಅವಿಶ್ವಾಸ ಮಂಡನೆ ಮಾಡುವುದು ಸದಸ್ಯರಿಗೆ ಬಿಟ್ಟದ್ದು. ಆದರೆ ವಿಧಾನ ಪರಿಷತ್‌ನ ಇತಿಹಾಸದಲ್ಲಿ ಡಿ.ಎಚ್. ಶಂಕರಮೂರ್ತಿ ಅವರು ಸಭಾಪತಿಯಾಗಿದ್ದ ಸಂದರ್ಭದಲ್ಲಿ ಒಮ್ಮೆ ಮಾತ್ರ ಅವಿಶ್ವಾಸ ಮಂಡನೆಯಾಗಿತ್ತು. ಅದರೆ ಅದಕ್ಕೆ ಸೋಲಾಗಿತ್ತು ಎಂದರು.

ನನ್ನ ಮೇಲೆ ಆರೋಪ ಮಾಡಿರುವ ಸದಸ್ಯರು ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದರೆ ಅದು ಅವರ ಹೇಡಿತನವಾಗುತ್ತದೆ. ಪಿಆರ್‌ಎಸ್ ಸಮಿತಿಗೆ ಆರು ಮಂದಿ ಹೊಸ ಸದಸ್ಯರನ್ನು ತರಬೇತಿಗೆ ಕಳುಹಿಸಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಆರೋಪ ಮಾಡಿದ್ದಾರೆ. ಹಕ್ಕು ಬಾಧ್ಯತಾ ಸಮಿತಿಗೆ ಮೊದಲ ಬಾರಿಗೆ ಮೇಲ್ಮನೆ ಸದಸ್ಯರಾಗಿರುವ ನಾಗರಾಜ್ ಯಾದವ್‌ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ನಾನು ಮಾಡಿದ ತಪ್ಪು ಎಂದು ಹೊರಟ್ಟಿ ಹೇಳಿದರು.

ಹಾಗೆಯೇ ನನ್ನ ಮತ್ತು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ನಡುವೆ ಅನ್ಯೋನ್ಯ ಸಂಬಂಧವಿದೆ. ಹೊಂದಾಣಿಕೆಯಿಂದ ಅಧಿವೇಶನ ನಡೆಸಿಕೊಂಡು ಹೋಗುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ಅವರ ನಡುವೆ ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ ದೂರು ಎಥಿಕ್ಸ್ ಸಮಿತಿಯ ಮುಂದೆ ಇದೆ. ಈ ಸಮಿತಿ ಎರಡು ಬಾರಿ ಸಭೆ ನಡೆಸಿದ್ದರೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸಮಿತಿಗೆ ಶೀಘ್ರ ತೀರ್ಮಾನ ಕೈಗೊಳ್ಳಿ ಎಂದು ಹೇಳುವ ಅಧಿಕಾರ ನನಗಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುವರ್ಣ ಸೌಧ ಮೊಗಸಾಲೆಯಲ್ಲಿ ಡಿಕೆ ಆಪ್ತರ ಸಭೆ
ನಾಳೆ ರಾಜ್ಯ ರೈತಸಂಘದಿಂದ ಬೆಳಗಾವಿ ಚಲೋ