ಚಾಮರಾಜನಗರ: ಇಂದು ಜಿಲ್ಲೆ, ರಾಜ್ಯದ ಎಲ್ಲ ಮಸೀದಿಗಳಲ್ಲಿ ಹಿಂದೂಸ್ತಾನದ ಜಯಕ್ಕಾಗಿ ಹಾರೈಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಚಾಮರಾಜನಗರದ ಜಮಾನ್ ಉಲ್ ಖುರಾನ್ ಮದರಸದ ಪ್ರಾಂಶುಪಾಲ ಅಬ್ದುಲ್ ಖಾದಿರ್ ಹೇಳಿದರು.
ಅಲ್‌ಕೈದಾ ಸಂಘಟನೆ ಜಿಹಾದ್ ಕರೆ ಕುರಿತು ಪ್ರತಿಕ್ರಿಯಿಸಿ, ಜಿಹಾದ್ ಎಂದರೆ ನಮ್ಮೊಳಗಿನ ದುರ್ಗುಣಗಳ ವಿರುದ್ಧ ಹೋರಾಟ. ನಾವು ಭಾರತದ ಪರ ಇದ್ದೇವೆ. ಭಾರತ ನಮ್ಮ ಮನೆ, ನಮ್ಮ ಮನೆಯೊಳಗೆ ಪಾಕ್ ಇರಲಿ, ಅಫ್ಘಾನ್ ಇರಲಿ ಬೇರೆಯವರು ಬರಲು ಅವಕಾಶ ಕೊಡುವುದಿಲ್ಲ, ಯಾವುದೇ ಮುಸ್ಲಿಂ ದೇಶದಿಂದ ಬಂದರೂ ಅವರಿಗೆ ಅವಕಾಶ ಕೊಡುವುದಿಲ್ಲ ಎಂದರು.
ನಮ್ಮ ಭಾರತ ಇಡೀ ವಿಶ್ವದಲ್ಲೇ ಶಕ್ತಿಶಾಲಿ ರಾಷ್ಟ್ರ ಆಗಿದೆ, ಪಾಕಿಸ್ತಾನ ನಮ್ಮ ಕರ್ನಾಟಕದಷ್ಟೂ ಇಲ್ಲ, ಅವರ ಹತ್ರ ಏನಿದೆ..? ಸುಮ್ಮನೆ ವೀಡಿಯೋ ತೋರಿಸುತ್ತಿದ್ದಾರೆ, ಭಾರತ ಮನಸ್ಸು ಮಾಡಿದರೇ ಪಾಕಿಸ್ತಾನಕ್ಕೆ ಒಂದೂ ದಿನವೂ ಹೆಚ್ಚು ಎಂದು ಸೇನೆ ಶಕ್ತಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.ಮಸೀದಿಗಳಲ್ಲಿ ಪ್ರಾರ್ಥನೆ:
ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಆದೇಶದ ಮೇರೆಗೆ ಇಂದು ಚಾಮರಾಜನಗರದ ಎಲ್ಲ ಮಸೀದಿಗಳಲ್ಲಿ ಭಾರತೀಯ ಸೇನೆ ಯಶಸ್ಸು ಮತ್ತು ಶ್ರೇಯಸ್ಸಿಗೆ ಹಾರೈಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಶುಕ್ರವಾರ ಮಧ್ಯಾಹ್ನ ನಗರದ ಮದೀನಾ ಮಸೀದಿ ಸೇರಿ ಎಲ್ಲ ಮಸೀದಿಗಳಲ್ಲಿ ಭಾರತ ದೇಶವು ಯುದ್ಧದಲ್ಲಿ ಜಯಗಳಿಸಲಿ ಹಾಗೂ ಭಾರತದ ಸೇನೆಗೆ ಮತ್ತಷ್ಟು ಬಲ ಬರಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಾರತ, ಭಾರತದ ಸೇನೆಗೆ ಒಳಿತಾಗಲಿ, ಆಪರೇಷನ್ ಸಿಂದೂರ 2.0 ಯಶಸ್ವಿಯಾಗಲಿ, ಸೇನೆಗೆ ಬಲ ಸಿಗಲಿ ಎಂದು ಮುಸ್ಲೀಂ ಸಮುದಾಯ ದುವಾ ಸಲ್ಲಿಸಿತು.