ಕನ್ನಡಪ್ರಭ ವಾರ್ತೆ ಮಂಡ್ಯಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಗೆ ಹೆಚ್ಚಿನ ಶಕ್ತಿ ನೀಡಲೆಂದು ಬಿಜೆಪಿ ಕಾರ್ಯಕರ್ತರು ಇಲ್ಲಿನ ವಿದ್ಯಾನಗರದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.ಶ್ರೀ ವಿದ್ಯಾಗಣಪತಿ ದೇವಾಲಯಕ್ಕೆ ತೆರಳಿ ಭಾರತೀಯ ಸೇನೆ ಹೆಸರಿನಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು. ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಲಾಯಿತು.ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸುತ್ತಿದೆ. ಆದರೆ ಇಂತಹ ಸಮಯದಲ್ಲಿ ಭಾರತದ ಪರವಾಗಿ ನಿಲ್ಲಬೇಕಾದ ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಂಡ್ಯ ಸಂಸದರಾಗಿದ್ದ ರಮ್ಯಾ ಅವರು ಕೇವಲ ಆರು ತಿಂಗಳಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡಿದ್ದರು. ಅವರನ್ನು ಪಕ್ಷಾತೀತವಾಗಿ ಎಲ್ಲರೂ ಮೆಚ್ಚಿಕೊಂಡಿದ್ದರು. ಆದರೆ, ಇಂತಹ ಸಂದಿಗ್ಧ ಸಮಯದಲ್ಲಿ ಅವರು ಭಾರತೀಯರಾಗಿರುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೀಮಿತರಾದವರಂತೆ ಬೇಜವಾಬ್ದಾರಿ ಹೇಳಿಕೆ ನೀಡುವುದು ಖಂಡನೀಯ ಎಂದರು.ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಧರ್ಮದ ಹೆಸರನ್ನು ಕೇಳಿಕೊಂಡು ಪಾಕಿಸ್ತಾನದ ಉಗ್ರರು ಹತ್ಯೆ ಮಾಡಿದರಲ್ಲ ಅದು ಸರಿಯೇ ಎಂದು ಪ್ರಶ್ನಿಸಿದ ಅವರು, ಇಂತಹ ಉಗ್ರರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಲಾಲ್‌ಬಹದ್ದೂರ್ ಶಾಸ್ತ್ರಿಯವರೂ ಸಹ ಇಂತಹ ಕಾರ್ಯವನ್ನು ಮಾಡಿದ್ದರು. ಜೊತೆಗೆ ಇಂದಿರಾ ಗಾಂಧಿಯವರೂ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದರು. ಇಂತಹ ಕಾರ್ಯಗಳನ್ನು ಯಾರೇ ಮಾಡಿದರೂ ಶ್ಲಾಘಿಸಬೇಕು. ಅದು ಬಿಟ್ಟು ಅಪಮಾನ ಮಾಡುವುದು ಕಾಂಗ್ರೆಸ್ ಮತ್ತು ಅದರ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟೈಕ್ ಮಾಡಿದ್ದ ಪ್ರಧಾನಿ ಮೋದಿ ಸರ್ಕಾರ, ಈಗ ಇಂತಹುದ್ದೇ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಉಗ್ರರ ಸದೆಬಡಿಸುವ ಕೆಲಸ ಮಾಡುತ್ತಿದೆ. ಪಾಕಿಸ್ತಾನದೊಳಗಿರುವ ಎಲ್ಲ ಉಗ್ರ ನೆಲೆಗಳನ್ನು ಹುಡುಕಿ ಹುಡುಕಿ ಬೇರು ಸಮೇತ ಕಿತ್ತುಹಾಕಬೇಕಾಗಿದೆ. ಇದಕ್ಕೆ ಭಾರತದಲ್ಲಿರುವ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದವರೂ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.ಭಾರತದ ಸೇನೆ ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡುತ್ತಿದೆ. ಭಾರತದ ಪ್ರತಿಯೊಬ್ಬ ಸೇನಾನಿಯ ಹಿಂದೆಯೂ ನಾವು ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಸೈನಿಕರಿಗೆ ಧೈರ್ಯ ತುಂಬುವುದು, ಅವರ ಆರೋಗ್ಯ ಕಾಪಾಡುವಂತೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.ಬಿಜೆಪಿ ನಗರಾಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಮುಗ್ದ ಹಿಂದೂಗಳ ಮಾರಣದ ಹೋಮದ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಉಗ್ರರ ಹೆಡೆಮುಡಿ ಕಟ್ಟುತ್ತಿದೆ. ನಮ್ಮ ಭಾರತ ಸೇನೆಗೆ ಹೆಚ್ಚಿನ ಶಕ್ತಿ ನೀಡಲಿ ಎಂಬ ಕಾರಣಕ್ಕೆ ವಿಶೇಷ ಪೂಜೆ ಮಾಡಿಸಿದ್ದೇವೆ. ಪ್ರಧಾನಿ ನರೇಂದ್ರಮೋದಿ, ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಇತರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಮುಖಂಡರಾದ ಸಿದ್ದರಾಜುಗೌಡ, ನಾಗಾನಂದ, ಸಿ.ಟಿ. ಮಂಜುನಾಥ್, ಪುಟ್ಟಸ್ವಾಮಿ, ಮಹಂತಪ್ಪ, ಕೇಶವ, ಚಂದ್ರು, ಪ್ರಸನ್ನ, ಶಿವಕುಮಾರ್ ಇತರರು ಹಾಜರಿದ್ದರು. ೯ಕೆಎಂಎನ್‌ಡಿ-೨ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಗೆ ಹೆಚ್ಚಿನ ಶಕ್ತಿ ನೀಡುವಂತೆ ಮಂಡ್ಯದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.