;Resize=(412,232))
ಮೈಸೂರು : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಹಣಕಾಸಿನ ಸಚಿವರಾಗದಿದ್ದರೆ ಅನೇಕರ ಕುಟುಂಬಗಳು ಕೂಲಿ ಮಾಡಿ, ಸಾಲ ಮಾಡಿ ಬದುಕಬೇಕಾಗುತ್ತಿತ್ತು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವಕಾಶದಿಂದ ವಂಚಿತರಾದವರಿಗೆ ಅವಕಾಶ ಕೊಡದಿದ್ದರೆ ನನ್ನ ಜೀವನ ಸಂಪೂರ್ಣ ಕತ್ತಲಲ್ಲಿ ಕಳೆಯಬೇಕಿತ್ತು ಎಂದು ಅನೇಕ ಮಂದಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೇಳುತ್ತಾರೆ. ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜಕೀಯ ತೀರ್ಮಾನವಲ್ಲ, ವೋಟು ಪಡೆಯುವ ತೀರ್ಮಾನ ಅಲ್ಲ, ಜಾತಿ, ಧರ್ಮದ ತೀರ್ಮಾನವೂ ಅಲ್ಲ. ಸಂವಿಧಾನದ ಆಶಯದಂತೆ ಸಮಾನತೆ, ಸಮಾನ ಅವಕಾಶದ ಪೂರಕವಾದ ನಿರ್ಧಾರ. ಅದರ ಮೂಲಕ ಸಮೃದ್ಧ ನಾಡು ಕಟ್ಟುವ, ತುಳಿತಕ್ಕೆ ಒಳಗಾದ ಜನರಿಗೆ ಅವಕಾಶ ನೀಡಿ, ಸ್ವಾಭಿಮಾನದಿಂದ ಬದುಕುವ ಅವಕಾಶವನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ ಎಂದರು.
ಹಳೇ ವಿದ್ಯಾರ್ಥಿಗಳು ಒಳ್ಳೆ ಒಳ್ಳೆಯ ಹುದ್ದೆಗೆ ಹೋಗಿದ್ದೀರಿ. ನೀವು ಸಮಾಜದ ಪರಿವರ್ತನೆಗೆ ಕಾರಣರಾಗಬೇಕು. ಸಿದ್ದರಾಮಯ್ಯ ಅವರ ನಾಯಕತ್ವ ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಅಗತ್ಯ ಅನಿವಾರ್ಯ. ಅದನ್ನು ಗಟ್ಟಿಗೊಳಿಸುವ ಬಲಗೊಳಿಸುವುದು ನಮ್ಮ ಆದ್ಯ ಕರ್ತವ್ಯ. ಜಾಗೃತಿ ಮತ್ತು ಅರಿವು ಮೂಡಿಸುತ್ತ, ಬಹಿಷ್ಕೃತ ಯುಗದ ಸಭೆ ಕರೆದರು. ಯಾವ ಜನರಿಗೆ ಅವಕಾಶ ಸಿಗಬೇಕೋ, ಶೋಷಣೆಗೆ ಒಳಗಾಗಿದ್ದರೋ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಹಕ್ಕು ಪಡೆಯಬೇಕು ಅಷ್ಟೆ ಎಂದರು.
ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಪರವಾಗಿ ಕೆಲಸ ಮಾಡಿದರು. ಯಾವ ಜನ ಸಾಲ ಮಾಡಿ ಸಾಲದ ಬಡ್ಡಿಗೆ ದುಡಿಯುತ್ತಿದ್ದ ಕಾಲದಲ್ಲಿ ಅವರಿಗೆ ಋಣಮುಕ್ತ ಕಾಯಿದೆ. ಉಳುವವನೇ ಭೂಮಿ ಒಡೆಯ ಮುಂತಾದ ಕಾಯ್ದೆ ಜಾರಿಗೊಳಿಸಿದರು. ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸಿದರು. ಅವರು ಗಟ್ಟಿ ನಾಯಕತ್ವವನ್ನು ಕೊಟ್ಟರು. ಒಬ್ಬ ವ್ಯಕ್ತಿಗೆ ಜಮೀನು ಇದೆ ಎಂದರೆ ಸಾಮಾಜಿಕ ಸ್ಥಾನಮಾನ ಸಿಗುತ್ತದೆ ಎಂಬ ಕಾರಣಕ್ಕೆ ಭೂಮಿ ದೊರಕುವಂತೆ ಮಾಡಿದರು. ಹಾವನೂರು ಆಯೋಗ ಜಾರಿಗೊಳಿಸಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ಅವರು ಹೇಳಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಜನರ ಬದುಕಿನ ಸ್ಥಿತಿಗತಿಗೆ ಅನುಗುಣವಾಗಿ ಮಾಹಿತಿ ಸಂಗ್ರಹಿಸಬೇಕು. ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ನೂರಾರು ಕೋಟಿ ಕೊಟ್ಟಿದ್ದಾರೆ. ಹಿಂದುಳಿದವರ ಸಮೀಕ್ಷೆಗೆ ಎಷ್ಟು ಸವಾಲು, ವಿರೋಧ ಎದುರಿಸಬೇಕಾಯಿತು ಎಂಬುದು ನಿಮಗೆ ಗೊತ್ತಿದೆ. ಸಂವಿಧಾನ ಬದ್ಧ ಅವಕಾಶ ಕೊಡಲು ಎಷ್ಟೊಂದು ವಿರೋಧವನ್ನು ಅವರು ಎದುರಿಸಬೇಕಾಯಿತು ಎಂಬುದು ನಿಮಗೆ ಗೊತ್ತಿರಬೇಕು. ಆದರೆ ಸಿದ್ದರಾಮಯ್ಯ ಎಂದಿಗೂ ಧಕ್ಕುವುದಿಲ್ಲ ಎಂದು ಅವರು ಶ್ಲಾಘಿಸಿದರು.