ಚಿತ್ರದುರ್ಗ: ಕೇಂದ್ರ ಸರ್ಕಾರ ಈ ಬಾರಿ ಅಧಿವೇಶನದಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಡುಗೊಲ್ಲರು ತಮ್ಮ ಶಕ್ತಿಯನ್ನು ಬಿಜೆಪಿ ವಿರುದ್ಧ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈಗ ಕೇಂದ್ರ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಇದಲ್ಲದೆ ಈಗ ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ಕಾಡುಗೊಲ್ಲರ ಬಗ್ಗೆ ಸಂಸತ್‍ನಲ್ಲಿ ಚರ್ಚೆಯಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗುವಂತೆ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಇಲ್ಲವಾದಲ್ಲಿ ಕಳೆದ ವಿಧಾನಸಭೆಯಲ್ಲಿ ಕಾಡುಗೊಲ್ಲರು ಬಿಜೆಪಿಯ ಬಗ್ಗೆ ತೆಗೆದುಕೊಂಡ ನಿರ್ಣಯವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಗೆದುಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ಇದಕ್ಕೆ ಆಸ್ಪದ ನೀಡದೇ ಅಧಿವೇಶನದಲ್ಲಿ ನಮ್ಮ ಜನಾಂಗದ ಬಗ್ಗೆ ನಿರ್ಣಯ ಮಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯವನ್ನು ಮಾಡಬೇಕು ಎಂದು ಶಿವುಯಾದವ್ ಒತ್ತಾಯಿಸಿದರು.
ಚಿತ್ರದುರ್ಗ ಕ್ಷೇತ್ರದ ಸಂಸದ ಹಾಗೂ ಸಚಿವ ಎ.ನಾರಾಯಣಸ್ವಾಮಿ ಇದರ ಬಗ್ಗೆ ಯಾವ ಮಾತಾಡುತ್ತಿಲ್ಲ. ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನಾರಾಯಣ ಸ್ವಾಮಿಗೂ ಮನವಿಯನ್ನು ಮಾಡಲಾಗಿತ್ತು. ಆದರೆ ಅವರು ಇದರುವರೆವಿಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಇದರ ಬಗ್ಗೆ ಅಧಿವೇಶನದಲ್ಲಿಯೂ ಸಹಾ ಮಾತನಾಡಿಲ್ಲ ಎಂದು ಸಚಿವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.ಗೋಷ್ಟಿಯಲ್ಲಿ ಕಾಡುಗೊಲ್ಲ ಕ್ಷೇಮಾಭೀವೃದ್ದಿ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಕಾರ್ಯಧ್ಯಕ್ಷ ಕದರಪ್ಪ, ಉಪಾಧ್ಯಕ್ಷ ತಿಮ್ಮೇಶ್, ಗದೀಶ್, ಹರೀಶ್ ಭಾಗವಹಿಸಿದ್ದರು.