ಕನಕಗಿರಿ:
ಕನಕಾಚಲಪತಿ ಜಾತ್ರೆಯೊಂದಿಗೆ (ಮಾ.20,21) ಕನಕಗಿರಿ ಉತ್ಸವ ಆಚರಿಸುವುದನ್ನು ಮುಂದೂಡಬೇಕು. ಇಲ್ಲದಿದ್ದರೆ ಮಾ. 7ರಂದು ಕನಕಗಿರಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಇಲ್ಲಿನ ಶ್ರಮಿಕ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವಪಕ್ಷಗಳ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಉತ್ಸವ ಆಚರಿಸುವ ಕುರಿತು ಘೋಷಿಸಿರುವುದು ತಪ್ಪು. ಈ ಹಿಂದೇ ನಡೆದ ಉತ್ಸವದ ಸಂದರ್ಭದಲ್ಲಿ ಸ್ಥಳೀಯ ಜನರ ಅಭಿಪ್ರಾಯ ಪಡೆದು ಉತ್ಸವದ ದಿನಾಂಕ ಘೋಷಿಸಲಾಗುತ್ತಿತ್ತು. ಆದರೆ, ಜಾತ್ರೆಯ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಉತ್ಸವದ ವಿಷಯ ಪ್ರಸ್ತಾಪಿಸಿ ಗೊಂದಲ ಸೃಷ್ಟಿಸಿದ್ದಾರೆ. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಕಷ್ಟಸಾಧ್ಯ ಎಂಬುದು ಸಚಿವರಿಗೆ ಗೊತ್ತಿದ್ದರು ಅದೇ ದಿನ ಉತ್ಸವ ಆಚರಿಸಲು ಆಸಕ್ತಿ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಭಕ್ತರಿಗೆ ಉಳಿದುಕೊಳ್ಳಲು, ವಾಹನ ನಿಲುಗಡೆ ಸ್ಥಳ, ಅನ್ನ ದಾಸೋಹ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಜಾಗದ ಕೊರತೆ ಇದೆ. ರಥಬೀದಿ 50 ಅಡಿ ಅಗಲ, 640 ಮೀಟರ್ ಉದ್ದದ ವಿಸ್ತೀರ್ಣ ಹೊಂದಿದ್ದು ತೀರಾ ಇಕ್ಕಟ್ಟಿನಲ್ಲಿ ರಥೋತ್ಸವ ಸೇರಿದಂತೆ ಜಾತ್ರಾ ಕಾರ್ಯಕ್ರಮ ನಡೆಯುತ್ತಿವೆ. ಗರುಡೋತ್ಸವ ಮತ್ತು ರಥೋತ್ಸವ ಎರಡೂ ದಿನವೂ ಭಕ್ತರಿಗೆ ಕುಡಿಯುವ ನೀರು ಕಲ್ಪಿಸಲು ಆಗುವುದಿಲ್ಲ. ಇನ್ನೂ ಸ್ನಾನ, ತಲೆಮಂಡಿ ಕೊಡುವ ಸ್ಥಳವಂತೂ ಜನಜಂಗುಳಿಯಿಂದ ಕೂಡಿರುತ್ತದೆ. ಜಾಗೆಯ ಕೊರತೆಯಿಂದ ಉತ್ಸವ, ರಥೋತ್ಸವವನ್ನು ರಾಜಬೀದಿಯ ಅಕ್ಕಪಕ್ಕದ ಮನೆಗಳ ಮೇಲ್ಚಾವಣಿಗಳ ಮೇಲೆ ನಿಂತು ವೀಕ್ಷಿಸುತ್ತಾರೆ. ಹೀಗಿರುವಾಗ ಕನಕಗಿರಿ ಉತ್ಸವ ಆಚರಿಸಿದರೆ ಬರುವ ಜನರನ್ನು ನಿಯಂತ್ರಿಸುವ ಜತೆಗೆ ಸೌಲಭ್ಯ ಕಲ್ಪಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.ಕನಕರಾಯನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಸಂಪ್ರದಾಯ, ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಸಚಿವರು ತರಾತುರಿಯಲ್ಲಿ ಉತ್ಸವ ಆಚರಿಸಲು ದಿನಾಂಕ ಘೋಷಿಸಿದ್ದಾರೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೂಲ ಸೌಲಭ್ಯ ಮುಖ್ಯವಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡು, ಉತ್ಸವ ಆಚರಣೆಯ ದಿನ ಬದಲಾಯಿಸಬೇಕು. ಇಲ್ಲವಾದರೆ, ಮಾ. 7ರಂದು ಕನಕಗಿರಿ ಬಂದ್ ಕರೆ ನೀಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಕೈ ಮುಖಂಡರು ಗೈರು: ಆಕ್ರೋಶ
ಕನಕಗಿರಿ ಉತ್ಸವ ಮುಂದೂಡಲು ಒತ್ತಾಯಿಸಿ ಪಕ್ಷಾತೀತವಾಗಿ ಕರೆಯಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಗೈರಾಗಿದ್ದಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ, ಜೆಡಿಎಸ್ ಸೇರಿ ಹಲವು ಪಕ್ಷ, ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡು ತಾಲೂಕು ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಿ. ಕನಕಪ್ಪ, ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಾಗೀಶ ಹಿರೇಮಠ, ಪಪಂ ಸದಸ್ಯರಾದ ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ, ಕನಕಾಚಲಪತಿ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಯಮನೂರಪ್ಪ ಸೂಡಿ, ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ, ಪ್ರಮುಖರಾದ ರುದ್ರಮುನಿ ಪ್ರಭುಶೆಟ್ಟರ್, ಸಣ್ಣ ಕನಕಪ್ಪ, ಹನುಮಂತರೆಡ್ಡಿ, ಪ್ರಕಾಶ ಹಾದಿಮನಿ, ಅಯ್ಯನಗೌಡರೆಡ್ಡಿ, ಕನಕಪ್ಪ ಕೊರಗಟಗಿ, ಗಣೇಶರೆಡ್ಡಿ ಕೆರಿ, ಉಮಕಾಂತ ದೇಸಾಯಿ, ಲಿಂಗಪ್ಪ ಪೂಜಾರ, ಶರಣಪ್ಪ ಎಂ. ಭತ್ತದ, ಹನುಮೇಶ ಯಲಬುರ್ಗಿ, ಕೀರ್ತಿ ಸೋನಿ, ಸಿಂಧು ಬಲ್ಲಾಳ, ಶರಣಪ್ಪ ಭಾವಿಕಟ್ಟಿ, ಅರುಣ್ ಭುಸನೂರುಮಠ, ಶರಣಪ್ಪ ಪಲ್ಲವಿ ಸೇರಿದಂತೆ ಹಮಾಲರು, ರೈತರು, ಕಾರ್ಮಿಕರು ಇದ್ದರು.