ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಬಹುತೇಕ ಸರ್ಕಾರಿ ಇಲಾಖೆಗಳಿಗೆ ಯುಜಿಡಿ ಸಂಪರ್ಕವೇ ಇಲ್ಲ. ಸರ್ಕಾರಿ ಕಚೇರಿಗಳಾದ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಪಿಡ್ಲ್ಯೂಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ, ಅಗ್ನಿಶಾಮಕ ದಳ, ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ, ನಿವೃತ್ತ ನೌಕರರ ಸಂಘ ಹೀಗೆ ಹತ್ತಾರು ಸರ್ಕಾರಿ ಕಚೇರಿಗಳಲ್ಲಿ ಯುಜಿಡಿ ಸಂಪರ್ಕವಿಲ್ಲ. ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಬರುವ ರೈತರು, ಸಾರ್ವಜನಿಕರು, ಮಹಿಳೆಯರು, ವಯೋವೃದ್ದರು, ಅಂಗವಿಕಲರು ಹಾಗೂ ಕೆಲಸ ನಿರ್ವಹಿರುವ ನೌಕರರಿಗೂ ಶೌಚಗೃಹ ದ ಸಮಸ್ಯೆಯಾಗಿದೆ. ಇಲ್ಲಿರುವ ಶೌಚಗೃಹ ಗಳ ಪಿಟ್‌ಗಳು ತುಂಬಿ ಹೋಗುತ್ತಿರುವ ಕಾರಣ ಬಯಲು ಶೌಚಗೃಹ ವೇ ಗತಿಯಾಗಿದೆ. ಪದೇ ಪದೇ ಪಿಟ್‌ಗಳನ್ನು ಸ್ವಚ್ಚಗೊಳಿಸುವಂತೆ ನಗರಸಭೆಗೆ ಮೊರೆ ಹೋಗುವುದು ಸರ್ವೇಸಾಮಾನ್ಯವಾಗಿದ್ದು ಅಲ್ಲದೆ ಕೆಲ ಶಾಲಾ-ಕಾಲೇಜುಗಳಲ್ಲಿಯೂ ಇದೇ ಗೋಳಾಗಿದೆ.
ಸರ್ಕಾರಿ ಆಯುರ್ವೇದ ಆಸ್ಪತ್ರೆ ಇದ್ದು, ಪ್ರತಿ ದಿನ ೫೦ಕ್ಕೂ ಹೆಚ್ಚು ರೋಗಿಗಳು ಬಂದು ಹೋಗುತ್ತಾರೆ. ಪಂಚಕರ್ಮ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳಿಗೆ ನೀರಿನ ಅವಶ್ಯಕತೆ ಹೆಚ್ಚಿದ್ದು ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ಈ ಆಸ್ಪತ್ರೆಯಲ್ಲೂ ಯುಜಿಡಿ ಸಂಪರ್ಕವಿಲ್ಲದ ರೋಗಿಗಳು ಪರದಾಡುವಂತಾಗಿದೆ. ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರಿ ಕಚೇರಿಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವಂತೆ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಮನವಿ ಮಾಡಿದ್ದಾರೆ. ಕೋಟ್ ೧ : ನಮ್ಮ ನಿವೃತ್ತ ನೌಕರರ ಸಂಘದಲ್ಲಿ ಯುಜಿಡಿ ಮತ್ತು ನೆಲ್ಲಿ ಸಂಪರ್ಕವಿಲ್ಲ. ಈ ಬಗ್ಗೆ ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು. ನಮ್ಮಲ್ಲಿ ನಿವೃತ್ತರೇ ಇರುವ ಕಾರಣ ಶೌಚಗೃಹ ದ ಅವಶ್ಯಕತೆ ಇದೆ. ಪ್ರತಿದಿನ ಮೂವತ್ತಕ್ಕೂ ಹೆಚ್ಚು ನಿವೃತ್ತರು ಸಂಘಕ್ಕೆ ಬಂದು ಹೋಗುತ್ತಾರೆ. ಅಲ್ಲದೆ ಪ್ರತಿ ತಿಂಗಳು ಮಾಸಿಕ ಸಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಸದಸ್ಯರು ಸೇರುತ್ತಾರೆ ಹಾಗೂ ವಿವಿಧ ಸಭೆ, ಸಮಾರಂಭಗಳು ನಡೆಯುವ ಕಾರಣ ಕೂಡಲೆ ಯುಜಿಡಿ ಸಂಪರ್ಕ ಕಲ್ಪಿಸಬೇಕು. - ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿಗಳು, ನಿವೃತ್ತ ನೌಕರರ ಸಂಘ, ತಿಪಟೂರು. ಕೋಟ್ ೨ : ನಗರಸಭೆಯು ಕೆಯುಡಿಐಎಸ್‌ಸಿ ಪ್ರಾಜೆಕ್ಟ್ ಅಡಿಯಲ್ಲಿ ಸುಮಾರು ೧೭ಕೋಟಿರೂ ವೆಚ್ಚದಲ್ಲಿ ಸರ್ಕಾರಿ ಇಲಾಖೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ೨-೩ತಿಂಗಳ ಕಾಲವಕಾಶಬೇಕಿದೆ. ಶೀಘ್ರದಲ್ಲೇ ಸಂಬಂದಪಟ್ಟ ಎಂಜಿಯರ್‌ಗಳೊಂದಿಗೆ ಮಾತನಾಡಿ ಯುಜಿಡಿ ಸಂಪರ್ಕ ವ್ಯವಸ್ಥೆ ನೀಡುತ್ತೇವೆ. ಅಲ್ಲಿಯವರೆಗೂ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕರಿಸಬೇಕಿದೆ. - ಯಮುನಾ ಧರಣೇಶ್, ಅಧ್ಯಕ್ಷರು, ನಗರಸಭೆ, ತಿಪಟೂರು. .