ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಆರ್‌ಎಸ್‌ಎಸ್‌ ಆಶಯ: ಮಂಗೇಶ ಭೇಂಡೆ

KannadaprabhaNewsNetwork | Published : Mar 5, 2025 12:36 AM

ಸಾರಾಂಶ

ಹಿಂದೂ ಸಮಾಜ ಒಂದುಗೂಡಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯತೆ ಭಾವನೆ, ಏಕತೆ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನದಿಂದ ಶ್ರಮಿಸುತ್ತಿದೆ. ಹಿಂದೂಗಳು ಜಾತಿ, ಮತಬೇಧ ಮರೆತು ಒಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಿಂದೂ ಸಮಾಜ ಒಂದುಗೂಡಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯತೆ ಭಾವನೆ, ಏಕತೆ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನದಿಂದ ಶ್ರಮಿಸುತ್ತಿದೆ. ಹಿಂದೂಗಳು ಜಾತಿ, ಮತಬೇಧ ಮರೆತು ಒಂದಾಗಬೇಕು. ಸಮಾಜದಲ್ಲಿ ಸಾಮರಸ್ಯ ಮೂಡಬೇಕು ಎಂಬುದು ಸಂಘದ ಆಶಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಸೇವಾ ಭಾರತಿ ಟ್ರಸ್ಟ್ ಬಾಗಲಕೋಟೆ ಶಾಖೆ ಅಡಿ ನೂತನವಾಗಿ ನಿರ್ಮಿಸಿರುವ ಆಶ್ರಯಧಾಮ ಹಾಗೂ ಸಂಘದ ನೂತನ ಕಟ್ಟಡ ಸಂಘಮಿತ್ರ ಕಾರ್ಯಾಲಯ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಆರ್‌ಎಸ್ಎಸ್ ಜಗತ್ತಿನ ಅತಿ ದೊಡ್ಡ ಸಂಘಟನೆಯ ಗಿ ಬೆಳೆದಿದೆ. ಸ್ವತಂತ್ರ್ಯ ಪೂರ್ವದಲ್ಲಿ ಹಾಗೂ ನಂತರ ಅನೇಕ ಸವಾಲು, ಸಂಕಷ್ಟ ಎದುರಿಸಿ ಗಟ್ಟಿಯಾಗಿ ನಿಂತಿದೆ. ತನ್ನ ಕಾರ್ಯಚಟುವಟಿಕೆ ವಿಸ್ತರಿಸುತ್ತಾ ಸಾಗುತ್ತಿದೆ. ಸಂಘ ಬೆಳೆದಂತೆ ತನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಶತಮಾನದ ಹೊಸ್ತಿಲಲ್ಲಿ ಬಂದು ನಿಂತಿದೆ ಎಂದು ಹೇಳಿದರು.

ಅಸ್ಪೃಶ್ಯತೆ ಹೋಗಲಾಡಿಸುವುದು, ಸಾಮಾಜಿಕ ಸಾಮರಸ್ಯ ಕಾಪಾಡುವುದು, ಸ್ವದೇಸಿ ಅಭಿಮಾನ ಹೆಚ್ಚಿಸುವುದು, ನಾಗರಿಕರ ಕರ್ತವ್ಯ, ಧರ್ಮ ರಕ್ಷಣೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಉದ್ದೇವಾಗಿದೆ. ಕೇವಲ ಪ್ರಚಾರಕರು ಬಂದಾಗ ಈ ಕಾರ್ಯವಾಗಬಾರದು. ನಮ್ಮ ದೈನಂದಿನ ಬದುಕಿನ ಮೂಲ ಉದ್ದೇಶವಾಗಿರಬೇಕು ಎಂದು ಸಲಹೆ ನೀಡಿದರು.

ಸಂಘ ಕ್ರಿಶ್ಚಿಯನ್, ಮುಸ್ಲಿಂ ವಿರೋಧಿ ಅಲ್ಲ. ಕೇವಲ ಹಿಂದೂಗಳ ರಕ್ಷಣೆ, ಧರ್ಮರಕ್ಷಣೆ, ಸಮಾಜಸೇವೆ ಉದ್ದೇಶ ಹೊಂದಿದೆ. ಯಾವುದೇ ಧರ್ಮದವಿರೋಧಕ್ಕಾಗಿ ಸಂಘ ಹುಟ್ಟಿಲ್ಲ. ಈ ನೆಲದ ಗಟ್ಟಿಯಾಗಿ ಉಳಿಯಬೇಕೆನ್ನುವ ಭಾವನೆಯಿಂದ ಸೇವೆ ಮಾಡುತ್ತಿದೆ ಎಂದರು.

ಚರಂತಿಮಠದ ಪ್ರಭುಸ್ವಾಮೀಜಿ ಮಾತನಾಡಿ, ಸಂಘ ಬಹಳಷ್ಟು ಕಷ್ಟ, ನೋವು ಅನುಭವಿಸಿದೆ. ಈ ನಗರಕ್ಕೆ ನಾನು ಆಗಮಿಸಿದಾಗ ಸ್ವಯಂ ಸೇವಕರ ಸೇವೆ ನೋಡಿ ಸಂತಸವಾಯಿತು. ಪ್ರತಿಯೊಬ್ಬರು ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು. ಮಕ್ಕಳು ದಾರಿ ತಪ್ಪದಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಗುಳೇದಗುಡ್ಡದ ನೀಲಕಂಠೇಶ್ವರ ಶಿವಚಾರ್ಯ ಸ್ವಾಮೀಜಿ, ಹಂಸನೂರಿನ ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಸ್ವಾಮೀಜಿ, ಆಳಂದದ ಶ್ರೀಶ್ರೈಲ ಶಿವಾವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಪ್ರಮುಖರಾದ ಬಸವರಾಜ ಡಂಬಳ, ರಘು ಅರಮಂಚಿ, ಚಿದಾನಂದ ಕರಮಾಕರ, ಡಾ.ಸುಭಾಸ ಪಾಟೀಲ, ಚಂದ್ರಶೇಖರ ದೊಡ್ಡಮನಿ ವೇದಿಕೆ ಮೇಲಿದ್ದರು.ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಪ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಅರುಣ ಶಹಾಪೂರ, ರಾಜಶೇಖರ ಶೀಲವಂತ, ಅರವಿಂದ ಲಿಂಬಾವಳಿ, ಎಂ.ಕೆ. ಪಟ್ಟಣಶೆಟ್ಟಿ, ಸಂಘದ ಪ್ರಮುಖರಾದ ಡಾ.ಸಿ.ಎಸ್. ಪಾಟೀಲ, ಗುಂಡುರಾವ ಶಿಂಧೆ ಇತರರು ಇದ್ದರು.ಬಾಗಲಕೋಟೆ ಅಡತ ಬಜಾರ್‌ನಲ್ಲಿ ಸಣ್ಣದಾಗಿ ಸಂಘದ ಕಾರ್ಯ ಆರಂಭವಾಯಿತು. ದಶಕಗಳ ಹೋರಾಟ, ಶ್ರಮದ ಫಲವಾಗಿ ಇಂದು ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಜ್ಯೋತಿ ಪ್ರಕಾಶ ಸಾಳುಂಕೆ, ಕಾಶಿನಾಥ ನಾವಲಗಿ, ಶಂಕರ ಮೇಲ್ನಾಡ ಸೇರಿದಂತೆ ಅನೇಕ ಮಹನೀಯರು ಇದಕ್ಕಾಗಿ ದೊಡ್ಡ ತ್ಯಾಗ ಮಾಡಿದ್ದಾರೆ. ಇದು ವಿರಾಮ ಸಮಯವಲ್ಲ. ಕಾರ್ಯಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ.

- ಮಂಗೇಶ ಭೇಂಡೆ ಆರ್‌ಎಸ್‌ಎಸ್‌ ಅಖಿಲ ಭಾರತ ವ್ಯವಸ್ಥಾ ಪ್ರಮುಖ

Share this article