ಜಗಳೂರು: ದೇವರಿಗೆ ಕನ್ನಡ ಕಲಿಸಿದ ಕನ್ನಡಿಗರಾದ ನಾವುಗಳೇ ಕನ್ನಡ ಉಳಿಸಿ ಬೆಳೆಸದಿದ್ದರೆ, ಮುಂದೊಂದು ದಿನ ಕನ್ನಡ ಭಾಷೆ ಆಡು ಭಾಷೆಯಾಗಿ ಉಳಿಯುವ ದಿನ ದೂರ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ರಾಜ್ಯದ 17 ಸಾವಿರ ಶಾಲೆಗಳ ಹಕ್ಕುಪತ್ರ ಇಲ್ಲ. ಮುಚ್ಚಿದ ಕನ್ನಡ ಶಾಲೆಗಳಿಗೆ ಮೂಲ ಮಾಲೀಕರು ವಶಪಡಿಸಿಕೊಳ್ಳುತ್ತಾರೆ. ಯಾರಿಗೆ ಬೇಕು ಕನ್ನಡ ಎನ್ನುವ ಸ್ಥಿತಿಯಾಗಿದೆ. ಸರ್ಕಾರವಾಗಲಿ, ನಾವು ನೀವುಗಳೂ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಶಾಲೆಗಳು ಕಣ್ಮರೆಯಾದರೂ ಅಚ್ಚರಿ ಇಲ್ಲ ಎಂದರು.
ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಿ ಮತ್ತು ಡಿ ಗ್ರೂಪ್‌ಗಳಲ್ಲಿ ಶೇ.60ರಷ್ಟು ಉದ್ಯೋಗವನ್ನು ಸ್ಥಳೀಯ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಹೊರಗುತ್ತಿಗೆ ನಡೆಸುವವರು ಶೇ.60 ಉದ್ಯೋಗ ಸ್ಥಳೀಯರಿಗೆ ನೀಡುವಂತ ಕೆಲಸ ಆಗಬೇಕಿದೆ ಎಂದರು.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಚಿನ್ನ ಹಗರಿಯ ನುಡಿತೇರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, ಕೊಂಡುಕುರಿ ವನ್ಯಧಾಮ, ಕಣ್ವಕುಪ್ಪೆ ಗವಿಮಠ ಐತಿಹಾಸಿಕ ಪ್ರವಾಸಿ ತಾಣಗಳು, ಭವ್ಯ ಇತಿಹಾಸ ಹೊಂದಿರುವ ಜಗಳೂರು ತಾಲೂಕಿನಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ಅಕ್ಷರದ ಜಾತ್ರೆ ನಡೆಯುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಜೊತೆ ಮಲ್ಲೇಶ್ ಸೇರಿದಂತೆ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು ಜೊತೆಗೂಡಿ ನಿಯೋಗ ತೆರಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ನಿಯೋಗದ ಮನವಿಗೆ ಸ್ಪಂದಿಸಿರುವ ಸಿಎಂ ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದರು. ಶಾಲೆಗಳ ಹಕ್ಕುಪತ್ರ ದಾಖಲೆ:
ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. 30 ವರ್ಷಗಳ ನಂತರ ಜಗಳೂರಿನಲ್ಲಿ ಎರಡನೇ ಬಾರಿಗೆ ಜಿಲ್ಲಾಮಟ್ಟದ ಸಮ್ಮೇಳನ ನಡೆಯಲು ಕನ್ನಡ ಅಭಿಮಾನಿಗಳಾದ ಜಗಳೂರು ಜನತೆಯ ಪ್ರೋತ್ಸಾಹವೇ ಕಾರಣ. ಕನ್ನಡದ ಬಗ್ಗೆ ಕೀಳರಿಮೆ ಬೇಡ. ನನ್ನ ಮಗ ಕನ್ನದಲ್ಲೇ ಐಎಎಸ್ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಪೋಷಕರು ಸಂಸ್ಕಾರ ಇಲ್ಲದ ಶಿಕ್ಷಣ ಕಲಿಸದೇ, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನೂ ಕೊಡಬೇಕೆಂದು ಮನವಿ ಮಾಡಿದರು.
ವಿಶ್ವಮಟ್ಟದ 3ನೇ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲು ಬಿ.ಎನ್.ಮಲ್ಲೇಶ್ ಅವರೊಂದಿಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಜಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡಲು ದೇಣಿಗೆ ಪಡೆಯಲು ಒತ್ತಾಯ ಮಾಡಿಲ್ಲ. 1300 ಜನರು ಸ್ವಯಂ ಪ್ರೇರಿತವಾಗಿ ದೇಣಿಗೆ ಕೊಟ್ಟಿದ್ದು, ಸಂಗ್ರಹಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರವನ್ನು ಸಹ ನೀಡುತ್ತೇವೆ ಎಂದು ತಿಳಿಸಿದರು.
ಪಾಪನಾಯಕ್, ಇಮಾಂ ಸಾಹೇಬರ ಆಡಳಿತ ಮಾಡಿದ ಐತಿಹಾಸಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಜಗಳೂರಿನಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿಕೊಂಡಿರುವುದು ಸಂತಸ ತಂದಿದೆ. ಕರ್ನಾಟಕದ ಕನ್ನಡ ಉಳಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ. ಹಿಂದಿ ಹಾಗೂ ಇಂಗ್ಲಿಷ್ ಜೋಡಿ ರಾಕ್ಷಸರು ಕನ್ನಡದ ಮೇಲೆ ದಾಳಿ ಮಾಡುತ್ತಿದ್ದಾರೆ. ಕನ್ನಡಕ್ಕೆ ಹಿಂದೆಂದಿಗಿಂತ ಹೆಚ್ಚು ಆತಂಕವಾಗುತ್ತಿದೆ. ಕೋಮುವಾದದ ಸೋಂಕು ಒಳಪ್ರವೇಶಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಗಳೂರು ತಾಲೂಕು ಕಚೇರಿಯಿಂದ ಆವರಣದ ಕುವೆಂಪು ಪ್ರತಿಮೆಯಿಂದ ಪ್ರಾರಂಭಗೊಂಡ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮೆರವಣಿಗೆ ಚಾಲನೆ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಅವರು ಸಮ್ಮೇಳಾಧ್ಯಕ್ಷರಿಗೆ ಕನ್ನಡದ ಧ್ವಜವನ್ನು ಹಸ್ತಾಂತರ ಮಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಅವರು ವಿವಿಧ ಕಲಾತಂಡಗಳ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಕುವೆಂಪು ಪುತ್ಥಳಿಗೆ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.