ಕನ್ನಡ ಉಳಿದರೆ ಸಂಸ್ಕೃತಿ ಉಳಿಯಲು, ಬೆಳೆಯಲು ಸಾಧ್ಯ: ಬಿ.ಎಲ್. ಪಾಟೀಲ

KannadaprabhaNewsNetwork |  
Published : Jul 27, 2026, 02:30 AM IST
ಕರ್ನಾಟಕ ವಿದ್ಯಾವರ್ಧಕ ಸಂಘದ 137ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಆರ್‌.ಕೆ. ಪಾಟೀಲ ಅವರಿಗೆ `ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿಯ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದರೆ, ಸಂಖದಲ್ಲಿ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿದೆ ಬಿ.ಎಲ್. ಪಾಟೀಲ ಹೇಳಿದರು

ಧಾರವಾಡ: ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡವನ್ನು ಜೀವಂತವಾಗಿಸುವ ಕಾರ್ಯವನ್ನು ಮಹಾರಾಷ್ಟ್ರ ಜತ್ತ ತಾಲೂಕಿನ ಸಂಖ ಗ್ರಾಮದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್.ಕೆ. ಪಾಟೀಲ ಮಾಡಿದ್ದಾರೆ ಎಂದು ಅಥಣಿ ವಿಮೋಚನಾ ಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್. ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ 137ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಆರ್‌.ಕೆ. ಪಾಟೀಲ ಅವರಿಗೆ `ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ ಪ್ರದಾನ ಮಾಡಿ, ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿಯ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದರೆ, ಸಂಖದಲ್ಲಿ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿದೆ. ಕರ್ನಾಟಕದಲ್ಲಿ ಶೇ. 90ರಷ್ಟು ನಾವು ಅರ್ಥವಾಗದ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಇಲ್ಲದಂತೆ ಮಾಡಿದ್ದೇವೆ. ಆರ್.ಕೆ. ಪಾಟೀಲರು ಕನ್ನಡದ ಹಿರಿಯ ಚೇತನ ಶಕ್ತಿ. ಅವರ ಕನ್ನಡದ ಅಸ್ಮಿತೆಯನ್ನು ನಾವಿಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯಲು, ಬೆಳೆಯಲು ಸಾಧ್ಯ ಎಂದು ಹೇಳಿದರು.

ಸಂಘದ ಗೌರವ ಉಪಾಧ್ಯಕ್ಷ ಡಾ. ಅಜಿತಪ್ರಸಾದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ ನಡೆಸುವುದು ತುಂಬಾ ಕಷ್ಟ. ಖಾಲಿ ಹುದ್ದೆ ತುಂಬಲು ಸರ್ಕಾರದ ಅನುಮತಿ ಇಲ್ಲದ್ದರಿಂದ ಹೆಚ್ಚು ಆರ್ಥಿಕ ಹೊರೆ ಆಡಳಿತ ಮಂಡಳಿ ಹೊರಬೇಕಿದೆ. ಆರ್.ಕೆ. ಪಾಟೀಲ ಅವರು ಸಂಖದಲ್ಲಿ ಪಿಯುಸಿ ವಿಜ್ಞಾನ ವಿಷಯವನ್ನು ಕನ್ನಡ ಮಾಧ್ಯಮದಲ್ಲಿ ನೀಡುತ್ತಿರುವ ಕಾರ್ಯ ಅನನ್ಯ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆರ್.ಕೆ. ಪಾಟೀಲ, ಗಡಿ ಭಾಗ ಸಂಖದಲ್ಲಿ ನಾವು 60 ವರ್ಷಗಳ ಹಿಂದೆಯೇ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಿದ್ದೇವೆ. ನಾವು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ಆರ್ಥಿಕ ಹೊರೆಯಾಗಬಾರದೆಂದು ವಿವಿಧ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳು ಕನ್ನಡ ಅಂಕಿಗಳನ್ನೇ ಬರೆಯುವ ಪರಿಪಾಠ ಬೆಳೆಸಿದ್ದೇವೆ ಎಂದು ಹೇಳಿದರು.

ಬೈರನಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಕರ್ನಾಟಕ-ಮಹಾರಾಷ್ಟ್ರ ನಡುವೆ ಕರುಳ ಬಳ್ಳಿಯ ಸಂಬಂಧವಿದ್ದು ಗಡಿಭಾಗದ ಕನ್ನಡ ಶಾಲೆಗಳಿಗೆ ಅಲ್ಲಿಯ ಸರ್ಕಾರ ಸಕಲ ಸೌಲಭ್ಯ ಒದಗಿಸಬೇಕು. ಆರ್.ಕೆ. ಪಾಟೀಲರು ಕನ್ನಡದ ಶಕ್ತಿಯಾಗಿ ಕೆಲಸ ಮಾಡುವ ಕಾರ್ಯ ಅನನ್ಯ ಎಂದರು.

ನಂತರ ಸಿ.ಯು. ಬೆಳ್ಳಕ್ಕಿ ರಚಿಸಿದ `ಪಾಟೀಲ ಪುಟ್ಟಪ್ಪ’ ಕಿರುಹೊತ್ತಿಗೆ ಲೋಕಾರ್ಪಣೆಗೊಂಡಿತು. ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಇದ್ದರು. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಮೇಲಿದೆ ಸಮಾಜದ ಭವಿಷ್ಯ ರೂಪಿಸುವ ಹೊಣೆ: ಡಿ.ಕೆ. ಹೊನ್ನಪ್ಪನವರ
ನರಗುಂದ ತಾಲೂಕಿನಲ್ಲಿ ಬೆಳೆ ಉಳಿಸಲು ಟ್ಯಾಂಕರ್‌ ನೀರಿನ ಮೊರೆ