ಶಾಸಕ ಬಿಆರ್‌ಪಿ ಸಮಸ್ಯೆಗಳಿದ್ದರೆ ಸಿಎಂ ಬಳಿ ಚರ್ಚಿಸಲಿ: ಸಚಿವ ಪ್ರಿಯಾಂಕ್ ಖರ್ಗೆ

KannadaprabhaNewsNetwork |  
Published : Jun 25, 2025, 01:18 AM IST
ಫೋಟೋ- ಪ್ರಿಯಾಂಕ | Kannada Prabha

ಸಾರಾಂಶ

ಶಾಸಕರಾದ ಬಿ.ಆರ್. ಪಾಟೀಲ್ ಅವರು ಹಿರಿಯರು.‌ ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ‌ ಸಿಎಂ, ಡಿಸಿಎಂ ಹಾಗೂ ಖರ್ಗೆ ಸಾಹೇಬರ ಬಳಿ ಚರ್ಚಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶಾಸಕರಾದ ಬಿ.ಆರ್. ಪಾಟೀಲ್ ಅವರು ಹಿರಿಯರು.‌ ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ‌ ಸಿಎಂ, ಡಿಸಿಎಂ ಹಾಗೂ ಖರ್ಗೆ ಸಾಹೇಬರ ಬಳಿ ಚರ್ಚಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯ ಐವಾನ್ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ಆರ್.‌ಪಾಟೀಲ್ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಹಿರಿಯರು ಏನಾದರೂ ಸಮಸ್ಯೆ ಇದ್ದರೆ ಸೂಕ್ತವಾದ ವೇದಿಕೆಯಲ್ಲಿ ಹಿರಿಯರೊಂದಿಗೆ ಚರ್ಚಿಸಬೇಕಿತ್ತು. ಹೀಗೆ ಬಹಿರಂಗವಾಗಿ ಹೇಳುವುದರಿಂದ ಸರ್ಕಾರಕ್ಕೆ ಮುಜುಗರವಾಗತ್ತದೆ ಎಂದರು.

ಫೋನ್ ನಲ್ಲಿ ನಡೆದ‌ ಸಂಭಾಷಣೆಯಲ್ಲಿ ಅಧಿಕಾರಿ ಸ್ಪಷ್ಟವಾಗಿ ಪಾಟೀಲ್ ಅವರ ಆರೋಪಗಳನ್ನು ಅಲ್ಲಗಳೆದು ಅಂತಹ ಯಾವುದಾದರೂ ಲೋಪ ಆಗಿದ್ದಕ್ಕೆ ಆಧಾರ ಕೊಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದನ್ನು ಹಿರಿಯರಾದ ಪಾಟೀಲರು ಸಿಎಂ ಅವರ ಬಳಿ ಚರ್ಚಿಸಬೇಕಿತ್ತು. ಈಗ ಸಿಎಂ, ಅವರನ್ನು ಕರೆದಿದ್ದಾರೆ ಅಲ್ಲಿ ಏನು ಚರ್ಚೆ ನಡೆಯುತ್ತದೆಯೋ ನೋಡೋಣ ಎಂದರು.

ಜಯದೇವ ಆಸ್ಪತ್ರೆಯಲ್ಲಿ ಚಿತ್ತಾಪುರ ಹಾಗೂ ಸೇಡಂ ತಾಲೂಕಿನವರೇ ತುಂಬಿಕೊಂಡಿದ್ದಾರೆ ಎಂದು ಬಿ.ಆರ್ ಪಾಟೀಲ್ ಆರೋಪಿಸಿದ್ದಾರಲ್ಲ ಎಂದು ಕೇಳಿದಾಗ ಯೋಜನೆಗಳನ್ನು ತಂದಾಗ ಆಯಾ ಶಾಸಕರ ಕ್ಷೇತ್ರದ ಜನರು ಉದ್ಯೋಗ ನಿರೀಕ್ಷಿಸುವುದು ಸಹಜ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವ ಮಾತನ್ನು ಅಲ್ಲಗಳೆದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ ರು. 50,000 ಕೋಟಿ ಖರ್ಚು ಮಾಡಲಾಗಿದೆ. ಇದರಿಂದಾಗಿ ಜನರ ಆರ್ಥಿಕ ಸ್ಥಿರತೆ ಉಂಟಾಗಿದೆ. ಕೇಂದ್ರ ಸರ್ಕಾರ‌ದ ನೀತಿಗಳಿಂದಾಗಿ‌ ಸಮಸ್ಯೆ ಎದುರಿಸುತ್ತಿದ್ದ ಜನರಿಗೆ ಇದರಿಂದ ಅನುಕೂಲವಾಗಿದೆ ಎಂದರು.

ಶಾಸಕ ರಾಜು ಕಾಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಪ್ರತಿಯೊಬ್ಬ ಶಾಸಕರು ಹೆಚ್ಚಿನ ಅನುದಾನ ಕ್ಷೇತ್ರಕ್ಕೆ‌‌ ನಿರೀಕ್ಷೆ ಮಾಡುತ್ತಾರೆ ಅದರಲ್ಲಿ ತಪ್ಪೇನಿದೆ? ಎಂದು ಕೇಳಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಸತಿ ಯೋಜನೆಯ ಬಗ್ಗೆ ಆರೋಪ ಕೇಳಿ ಬಂದಾಗ ವಸತಿ ಸಚಿವರ ರಾಜೀನಾಮೆ ಬಗ್ಗೆ ಮಾತನಾಡಿರಬಹುದು ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತೋರಿಸುತ್ತಿರುವ ಅಸಡ್ಡೆಯಿಂದಾಗಿ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಿಯಾಂಕ್, 15 ನೆಯ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಪಾಲಿನಲ್ಲಿ ರು. 50,000 ಕೋಟಿ ಬಂದಿಲ್ಲ. ಇದು ಹಣಕಾಸಿನ ಸಮಸ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಜಲಜೀವನ್ ಮಿಷನ್ ಅಡಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು ಕೇಂದ್ರ ರು. 2,700 ಕೋಟಿ ಬಿಡುಗಡೆ ಮಾಡಬೇಕಿತ್ತು, ಆದರೆ ರು. 500 ಕೋಟಿ ಬಿಡುಗಡೆ ಮಾಡಿದೆ. ನಾವು ಕೆಲಸ ಅರ್ಧಕ್ಕೆ ನಿಲ್ಲಿಸಬಾರದು ಎಂದು ರಾಜ್ಯದಿಂದ ಅನುದಾನ ಬಿಡುಗಡೆ ಮಾಡಿ ಕೆಲಸ‌ ಮುಂದುವರೆಸಿದ್ದೇವೆ. ಜೊತೆಗೆ ರಾಜ್ಯ ಸರ್ಕಾರದಿಂದ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗಾಗಿ ರು. 5,000 ಕೋಟಿ ಅನುದಾನ ಬಳಸಿ ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆ ಜಾರಿಗೆ ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯಕ್ಕೆ ಬರಬೇಕಾಗಿದ್ದ ಬಂಡವಾಳವನ್ನು ಕೇಂದ್ರ ಸರ್ಕಾರ ಮಹಾರಾಷ್ಟ್ರ, ಗುಜರಾತ್, ಅಸ್ಸಾಂ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಅಸ್ಸಾಂ ನಲ್ಲಿ ಸೆಮಿಕಂಡಕ್ಟರ್ ಸ್ಥಾಪನೆ ಮಾಡುತ್ತಿದ್ದಾರೆ. ಇಲ್ಲಿ ನಾವು ಕಷ್ಟಪಡಬೇಕು ಅಲ್ಲಿ ಸಬ್ಸಿಡಿ ಎಂದು ಬಂಡವಾಳ ಬಿಡುಗಡೆ ಮಾಡಲಾಗುತ್ತದೆ. ಅವರು ಕಷ್ಟಪಟ್ಟು ಬಂಡವಾಳ ಆಕರ್ಷಿಸಲಿ ಎಂದು ಪ್ರಿಯಾಂಕ್ ಹೇಳಿದರು.

ಬಿಜೆಪಿ ನಾಯಕರು ಸಚಿವ ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಪ್ರಶ್ನಿಸಿದಾಗ, ಮೊದಲು ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆಗೆ ಅವರದೇ ಪಕ್ಷದ ಕೆಲವರು ಒತ್ತಾಯಿಸುತ್ತಿದ್ದಾರಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದ ಸಚಿವರಿಂದ ಬಿಹಾರ್ ಚುನಾವಣೆಗೆ ಹಣ ಸಂಗ್ರಹಿಸಲು ಹೇಳಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆ ಗೆ ಉತ್ತರಿಸಿದ ಅವರು, ಬಿಜೆಪಿ ರಾಜ್ಯದಲ್ಲಿಯೂ ಅಧಿಕಾರದಲ್ಲಿತ್ತಲ್ಲ, ಆಗ ಅವರೂ ಹೀಗೆ ಮಾಡಿದ್ದರಾ? ಎಂದು ತಿರುಗೇಟು ನೀಡಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಇದ್ದರು.

ಎನ್‌ಡಿಎ ಅಲ್ಲ ನೋ ಡಾಟಾ ಅವೈಲೇಬಲ್‌ ಸರ್ಕಾರ: ಖರ್ಗೆ

ಅಮೇರಿಕಾ ಪ್ರವಾಸಕ್ಕೆ ಕೇಂದ್ರ ಅನುಮತಿ‌ ನಿರಾಕರಿಸಿದ್ದಕ್ಕೆ ರಾಜಕೀಯ ಕಾರಣವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕೀಯವಲ್ಲದೇ ಮತ್ತೇನು.? ಕೇಂದ್ರ ಸರ್ಕಾರದ ಅನುಮತಿ ನಿರಾಕರಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ನಿರೀಕ್ಷಿತ ರು. 15,000 ಕೋಟಿ ಬಂಡವಾಳ ನಿಂತುಹೋಗಿದ್ದು, ಬೋಸ್ಟನ್‌ನಲ್ಲಿ ನಡೆಯಲಿರುವ ''''ಬೋಸ್ಟನ್ ಬಯೋ'''' ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜರುಗಲಿರುವ ''''ಡಿಸೈನ್ ಆಟೋಮೇಷನ್ ಕಾನ್ಫರೆನ್ಸ್''''ನಲ್ಲಿ ಭಾಗವಹಿಸಬೇಕಿತ್ತು. ಈ ಎರಡು ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಕರ್ನಾಟಕದ ನಿಯೋಗವನ್ನು ಮುನ್ನಡೆಸಬೇಕಿತ್ತು.ರಾಜ್ಯದ ಐಟಿ ಮತ್ತು ಬಿಟಿ ವಲಯಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನು ಮತ್ತು ಹೂಡಿಕೆಗಳನ್ನು ತರುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ಆದರೆ ಕೇಂದ್ರ ಸರ್ಕಾರ ಅಮೆರಿಕಾಗೆ ತೆರಳಲು ಅವಕಾಶ ನೀಡದಿರುವುದು ಬಹುಕೋಟಿ ಹೂಡಿಕೆಗೆ ಮರ್ಮಾಘಾತ ಉಂಟು ಮಾಡಿದೆ ಎಂದರು. ಜೊತೆಗೆ ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಕೈತಪ್ಪಿದೆ. ಈ ಹಿಂದೆ ತಾವು ಹಾಗೂ ಸಚಿವ ಎಂ.ಬಿ.ಪಾಟೀಲ್ ಅಮೇರಿಕಾ ಪ್ರವಾಸ ಕೈಗೊಂಡಿದ್ದರಿಂದ ರು. 32,000 ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದವಾಗಿದ್ದು, ಸುಮಾರು ರು. 21,000 ಕೋಟಿಗೂ ಅಧಿಕ‌ ಬಂಡವಾಳ ಹೂಡಲಾಗಿತ್ತು ಇದರಿಂದ 18,000 ರಿಂದ 20,000 ಜನರಿಗೆ ಉದ್ಯೋಗ ದೊರಕಿತ್ತು ಎಂದು ನೆನಪಿಸಿಕೊಂಡರು.

ಕೇಂದ್ರ ವಿದೇಶಾಂಗ ಸಚಿವರಿಗೆ ಅನುಮತಿ‌ ನಿರಾಕರಣೆಗೆ ವಿವರಣೆ ನೀಡುವಂತೆ ಪತ್ರ ಬರೆಯಲಾಗಿದೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ನಮ್ಮ ಯಾವ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ? ಕೇಂದ್ರದಲ್ಲಿರುವುದು ಎನ್ ಡಿ ಎ ಸರ್ಕಾರವಲ್ಲ ನೋ ಡಾಟಾ ಅವೈಲೇಬಲ್ ಸರ್ಕಾರ ಎಂದು ಟೀಕಿಸಿದರು. ಈಗ ಅಮೇರಿಕಾ ಹೋಗಬಹುದೇ ಎಂದು ಕೇಳಲಾದ ಪ್ರಶ್ನೆಗೆ ಟ್ರೇನ್ ಹೋದ ಮೇಲೆ ಟಿಕೇಟ್ ತಗೊಂಡು ಪ್ರಯೋಜನವೇನು? ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ