ಪತ್ರಿಕೆಗಳು ಎಚ್ಚರಿಸದಿದ್ದರೆ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಳ: ಟಿ.ಡಿ.ರಾಜೇಗೌಡ

KannadaprabhaNewsNetwork | Published : Jul 29, 2024 12:54 AM

ಸಾರಾಂಶ

ಪತ್ರಿಕೆಗಳು ಎಚ್ಚರಿಸುವ ಕೆಲಸ ಮಾಡದಿದ್ದರೆ ಸಮಾಜದಲ್ಲಿ ಇನ್ನಷ್ಟು ಭ್ರಷ್ಟಾಚಾರಗಳು ನಡೆಯುತ್ತಿತ್ತು ಎಂದು ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಸಚಿವ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.

ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪತ್ರಿಕೆಗಳು ಎಚ್ಚರಿಸುವ ಕೆಲಸ ಮಾಡದಿದ್ದರೆ ಸಮಾಜದಲ್ಲಿ ಇನ್ನಷ್ಟು ಭ್ರಷ್ಟಾಚಾರಗಳು ನಡೆಯುತ್ತಿತ್ತು ಎಂದು ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಸಚಿವ ಟಿ.ಡಿ.ರಾಜೇಗೌಡ ತಿಳಿಸಿದರು.

ಶನಿವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಟಿ.ವಿ.ಗಳಲ್ಲಿ ಕ್ಷಣ, ಕ್ಷಣ ಸುದ್ದಿ ಬರುತ್ತಿದ್ದರೂ ಇಂದಿಗೂ ದಿನ ಪತ್ರಿಕೆಗಳು ಗಟ್ಟಿಯಾಗಿ ನಿಂತಿವೆ. ಸರ್ಕಾರಗಳು ತಮ್ಮ ಯೋಜನೆಗಳನ್ನು ಸಹ ದಿನ ಪತ್ರಿಕೆಗಳು ಮೂಲಕವೇ ಪ್ರಕಟ ಮಾಡುತ್ತದೆ. ನರಸಿಂಹರಾಜಪುರ ತಾಲೂಕಿನ ಪತ್ರಕರ್ತರು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಭದ್ರ ಅಚ್ಚುಕಟ್ಟು ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಬರುವ ವರದಿಗಳು ದಾಖಲಾಗುತ್ತದೆ. ಪತ್ರಕರ್ತರು ವರದಿ ಮಾಡುವಾಗ ಅಭಿವೃದ್ದಿಗೆ ಪೂರಕವಾಗಿ ವರದಿ ಮಾಡಬೇಕು. ದ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ಆಡಳಿತದಲ್ಲಿರುವವರು ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಡಬೇಕು. ಜನಪ್ರತಿ ನಿಧಿಗಳು ಪತ್ರಿಕೆಗಳಲ್ಲಿ ಟೀಕೆಗಳು ಬಂದಾಗ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡಿ ತಿದ್ದಿಕೊಳ್ಳ ಬೇಕು. ಮಕ್ಕಳಿಗೆ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರ್ಕಾರ ಬಸ್‌ ಪಾಸ್‌ ನೀಡುವ ಯೋಜನೆ ರೂಪಿಸಿದೆ. ಅದನ್ನು ಸರ್ಕಾರ ಸಮರ್ಪಕವಾಗಿ ಅನುಷ್ಟಾನ ಗೊಳಿಸಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಪತ್ರಕರ್ತರು ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಜೊತೆಗೆ 4 ನೇ ಅಂಗವಾಗಿ ಪತ್ರಿಕೆಗಳು ಕೆಲಸ ಮಾಡುತ್ತಿದೆ. ಪ್ರಸ್ತುತ ದೊಡ್ಡ, ದೊಡ್ಡ ನಗರಗಳಲ್ಲಿ ಮಾದ್ಯಮ ವ್ಯಾಪಾರೀಕರಣವಾಗಿದೆ ಆದರೆ, ಗ್ರಾಮೀಣ ಭಾಗದಲ್ಲಿ ಪತ್ರಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿ ವರ್ಷವೂ ಬಸ್ತಿಮಠದಿಂದ ನೀಡುವ ಕ್ರಿಯಾ ಶೀಲ ಪತ್ರಕರ್ತ ಪ್ರಶಸ್ತಿಯನ್ನು ಬಾಳೆಹೊನ್ನೂರಿನ ಶಿವಾನಂದ ಭಟ್‌, ಹಿರಿಯ ಪತ್ರಕರ್ತ ಪ್ರಶಸ್ತಿಯನ್ನು ಶೆಟ್ಟಿಕೊಪ್ಪ ಮಹೇಶ್‌ ಅವರಿಗೆ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಗೌಡ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಅವರನ್ನು ತಾಲೂಕು ಪತ್ರಕರ್ತರ ಸಂಘದಿಂದ ಸನ್ಮಾನಿಸ ಲಾಯಿತು. ತಾಲೂಕು ಪತ್ರಕರ್ತರ ಸಂಘ ಮಹಿಳೆಯರಿಗೆ ಏರ್ಪಡಿಸಿದ್ದ ಜಾನಪದ ಗೀತೆಗಳ ಸ್ಪರ್ಧೆಯಲ್ಲಿ ಸೀತೂರಿನ ರಂಗಿಣಿ ಮತ್ತು ತಂಡದವರು ಪ್ರಥಮ , ಶೆಟ್ಟಿಕೊಪ್ಪದ ಗಾಯಿತ್ರಿ ಮತ್ತು ತಂಡದವರು ದ್ವಿತೀಯ ಹಾಗೂ ಸಿಂಸೆಯ ವಿಶ್ರೇಯ ಮತ್ತು ತಂಡ ತೃತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಬಹುಮಾನ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ನಾಗರಾಜ್‌ ವಹಿಸಿ ದ್ದರು. ಅತಿಥಿಗಳಾಗಿ ಸಣ್ಣ ಹಾಗೂ ಮದ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷ ಹಾತೂರು ಪ್ರಭಾಕರ್‌, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಯಡಗೆರೆ ಮಂಜುನಾಥ್‌, ಅಭಿನವ ಗಿರಿರಾಜ್‌, ಎಂ.ಸಿ.ಗುರುಶಾಂತಪ್ಪ , ಶೆಟ್ಟಿಕೊಪ್ಪ ಮಹೇಶ್ ಉಪಸ್ಥಿತರಿದ್ದರು.

Share this article