ಕುಕನೂರು ಬಳಿ ನೀಡದಿದ್ದರೆ ತಳಕಲ್ಲಿನ ಸ್ವಂತ ಜಾಗ ಸರ್ಕಾರಿ ಕಚೇರಿಗೆ ನೀಡುವೆ

KannadaprabhaNewsNetwork |  
Published : Nov 13, 2025, 01:15 AM IST
12ಕೆಕೆಆರ್1:ಕುಕನೂರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇತ್ತಿಚ್ಚೇಗೆ ಅಧಿಕಾರಿ ವಹಿಸಿಕೊಂಡ ಅಧ್ಯಕ್ಷ, ಉಪಾದ್ಯಕ್ಷ ಹಾಗೂ ಪದಾಧಿಕಾರಿಗಳು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರನ್ನು  ಸನ್ಮಾನಿಸಿದರು.  | Kannada Prabha

ಸಾರಾಂಶ

ಗುದ್ನೇಪ್ಪನಮಠದ ಜಾಗ ಕುರಿತು ಅಲ್ಲಿನ ಸೇವಾದಾರರು ಆ ಭೂಮಿ ತಮ್ಮದು ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ.

ಕುಕನೂರು: ಜಿಲ್ಲಾಡಳಿತ ಪ್ರಸ್ತಾವನೆ ಅನ್ವಯ ಗುತ್ತಿಗೆ ಆಧಾರದ ಮೇಲೆ ನಿಗದಿಯಾಗಿರುವ ಗುದ್ನೇಪ್ಪನಮಠ ದೇವಸ್ಥಾನ ಜಾಗವನ್ನು ತಾಲೂಕಾಡಳಿತ ಕಚೇರಿ, ಕೋರ್ಟ್, ಭವನ ನಿರ್ಮಾಣಕ್ಕೆ ನೀಡಿ, ಇಲ್ಲವೇ ಖಾಸಗಿ ಜಮೀನು ಕೊಡಿಸಿ.ಇವೆರೆಡೂ ಆಗದಿದ್ದರೆ ನಾನು ತಳಕಲ್ಲಿನ ನಮ್ಮ ಸ್ವಂತ ಜಾಗ ತಾಲೂಕಾಡಳಿತ ಕಚೇರಿ ನಿರ್ಮಾಣಕ್ಕೆ ನೀಡುವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಇತ್ತೀಚೆಗೆ ಗುದ್ನೇಪ್ಪನಮಠದ ದೇವಸ್ಥಾನ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣದ ಕುರಿತು ಜರುಗಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಗುದ್ನೇಪ್ಪನಮಠದ ಜಾಗ ಕುರಿತು ಅಲ್ಲಿನ ಸೇವಾದಾರರು ಆ ಭೂಮಿ ತಮ್ಮದು ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ. ಇದು ಯಾರ ಕೈಯಲ್ಲೂ ಇಲ್ಲ. ಇದು ನ್ಯಾಯಾಂಗ ಹಂತದಲ್ಲಿದೆ. ವೈಯಕ್ತಿಕವಾಗಿ ದೇವಸ್ಥಾನದ ಜಾಗ ಯಾರಿಗೂ ಕೊಡಲು ಬರುವುದಿಲ್ಲ. ದೇವಸ್ಥಾನದ ಭೂಮಿ ದೇವಸ್ಥಾನಕ್ಕೆ ಇರುವಂತೆ ಜಿಲ್ಲಾಧಿಕಾರಿ ತಮ್ಮ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಗುತ್ತಿಗೆ ಆಧಾರದ ಮೇಲೆ ಭೂಮಿ ನಿಗದಿ ಮಾಡಿದ್ದಾರೆ. ನ್ಯಾಯಾಂಗದ ತೀರ್ಮಾನಕ್ಕೆ ಬದ್ಧರಾಗೋಣ ಎಂದರು.

ದೇವಸ್ಥಾನದ ಭೂಮಿ ಯಾರಿಗಾದರೂ ಕೊಡಲು ಬರುತ್ತಿದ್ದರೆ ನಾನು ಸ್ವಾಮಿಯಾಗಿ ಭೂಮಿ ಪಡೆದುಕೊಳ್ಳುತ್ತಿದ್ದೆ. ನನ್ನ ಹಿಂದೆ ಇದ್ದವರಿಗೂ ಕೊಡಿಸುತ್ತಿದ್ದೇ. ಗುದ್ನೇಪ್ಪನಮಠ ಜಾಗ ತಾಲೂಕಾಡಳಿತ ಕಚೇರಿಗೆ ನೀಡಲು ಅಲ್ಲಿನ ಗಣಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿದಾರರು ತಮ್ಮ ಲಾಭಿಗಾಗಿ ಗುದ್ನೇಪ್ಪನಮಠದ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಇತ್ತೀಚೆಗೆ ಜರುಗಿದ ಪ್ರತಿಭಟನೆಯಲ್ಲಿ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ.ಅವರಿಗೆ ಅಭಿವೃದ್ಧಿಯ ಮುಂದಾಲೋಚನೆ ಇಲ್ಲ. ಹಿಂದಿನ ಶಾಸಕರು ಭೂಮಿ ಕೊಡಿಸಿದ್ದಾರೆ ಅಂತಾರಲ್ಲ, ಆ ಭೂಮಿಯನ್ನು ನಾಳೆಯೇ ಕೊಡಿಸಿ. ಅಲ್ಲಿಯೇ ತಾಲೂಕಾಡಳಿತ ಕಚೇರಿ ನಿರ್ಮಾಣ ಮಾಡೋಣ. ಖಾಸಗಿ ಜಮೀನೀನವರು ಕೋರ್ಟ್ ಮೊರೆ ಹೋಗಿ ಸ್ಟೇ ತಂದಿದ್ದಾರೆ. ಗುದ್ನೇಪ್ಪನಮಠದ ಜಮೀನು ಯಾರಿಗೂ ಸಿಗುವುದಿಲ್ಲ. ಅದು ಸರ್ಕಾರದ ಭೂಮಿ.ಒಂದು ವೇಳೆ ಅಲ್ಲಿ ತಾಲೂಕಾಡಳಿತ ಕಚೇರಿ ನಿರ್ಮಾಣ ಬೇಡ ಅಂದರೆ ಅದು ಸರ್ಕಾರಕ್ಕೆ ಹೋಗುತ್ತದೆ ಎಂದರು. ನನಗೆ ಗುದ್ನೇಪ್ಪನಮಠದವರು ವೋಟ್ ಹಾಕದಿದ್ದರೂ ಪರವಾಗಿಲ್ಲ ನಾನು ನ್ಯಾಯವಾಗಿಯೇ ಮಾತನಾಡುತ್ತೇನೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ಖಾಸೀಂಸಾಬ ತಳಕಲ್, ರೆಹೆಮಾನಸಾಬ್ ಮಕ್ಕಪ್ಪನವರ ಅಶೋಕ ತೋಟದ, ವೀರಯ್ಯ ತೋಂಟದಾರ್ಯಮಠ, ಮಂಜುನಾಥ ಕಡೆಮನಿ, ಶ್ರೀನಿವಾಸ ದೇಸಾಯಿ, ವೀರಣ್ಣ ಅಣ್ಣಿಗೇರಿ, ದಸ್ತಗೀರಿಸಾಬ್ ರಾಜೂರು ಇತರರಿದ್ದರು.

PREV

Recommended Stories

ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ
ಪ್ರಕೃತಿ ವಿಕೋಪಗಳ ಎದುರಿಸುವ ಧೈರ್ಯ ಎಲ್ಲರಲ್ಲಿರಲಿ: ಜಿಪಂ ಸಿಇಒ ಗಿತ್ತೆ ಮಾಧವ ರಾವ್‌