ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಸೂಚನೆ
ಯಲಬುರ್ಗಾದಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಂದು ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡಲು ಲಂಚ ಕೇಳಿದರೆ ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡುವ ಗಟ್ಟಿ ಮನಸ್ಸು ಮಾಡಬೇಕು ಎಂದು ರಾಯಚೂರು, ಕೊಪ್ಪಳ ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾರ್ವಜನಿಕರ ಕುಂದು-ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚಕ್ಕೆ ಆಮಿಷ ಇಟ್ಟರೆ ಕೂಡಲೇ ಲೋಕಾಯುಕ್ತರ ಗಮನಕ್ಕೆ ತಂದರೆ ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.ಯಾವುದೇ ಇಲಾಖೆಗಳ ಅಧಿಕಾರಿಗಳಾಗಲಿ, ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಅವರ ವ್ಯಾಪ್ತಿಯಲ್ಲಿ ಬರುತ್ತಿದ್ದರೆ ಮಾಡಿಕೊಡಬೇಕು. ಇಲ್ಲದಿದ್ದರೆ ಮೇಲಧಿಕಾರಿಗಳ ಹತ್ತಿರ ಕಳುಹಿಸಿ, ಅದು ಆಗದಿದ್ದರೆ ಅವರಿಗೆ ಹಿಂಬರಹ ಕೊಡುವುದನ್ನಾದರೂ ಮಾಡಿ, ಸುಮ್ಮನೆ ಲೋಕಾಯುಕ್ತಕ್ಕೆ ಬಂದು ಅರ್ಜಿ ಸಲ್ಲಿಸುತ್ತಾರೆ. ಅದಕ್ಕೆ ಅವಕಾಶ ನೀಡದೆ ನಿಮ್ಮ ವ್ಯಾಪ್ತಿಯಲ್ಲೇ ಸಮಸ್ಯೆ ಇತ್ಯರ್ಥಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿನಾಕಾರಣ ಇಲಾಖೆಗಳಿಗೆ ಅಲೆದಾಡಿಸುವುದಕ್ಕೆ ಹೋಗಬೇಡಿ. ಅದರಿಂದ ಮುಂದೆ ನಿಮಗೆ ತೊಂದರೆ ಆಗಲಿದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಸಾರ್ವಜನಿಕರು ಯಲಬುರ್ಗಾ ಮತ್ತು ಕುಕನೂರು ತಾಲೂಕಿಗೆ ಸಂಬಂಧಿಸಿದ ೧೦ಕ್ಕೂ ಹೆಚ್ಚು ಅರ್ಜಿಗಳನ್ನು ಕೊಪ್ಪಳ ಲೋಕಾಯುಕ್ತರಿಗೆ ಸಲ್ಲಿಸಿದರು.ಇನ್ನೂ ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಇತ್ಯರ್ಥಪಡಿಸಿ ಕೊಡುವುದಾಗಿ ಲೋಕಾಯುಕ್ತರು ಭರವಸೆ ನೀಡಿದರು.
ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಚಂದ್ರಪ್ಪ ಇಡಿ, ಕೊಪ್ಪಳ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಸುನೀಲ್ ವೇಗಮನಿ, ಶೈಲಾ ಪ್ಯಾಟಿಶೆಟ್ಟರ, ತಹಸೀಲ್ದಾರಗಳಾದ ಬಸವರಾಜ ತೆನ್ನಳ್ಳಿ, ಪ್ರಾಣೇಶ ಎಚ್., ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.