ಪಾಕ್‌ ಹುಚ್ಚುತನ ಮುಂದುವರೆದರೆ ಕೋಡಿ ಶ್ರೀಗಳ ಭವಿಷ್ಯ ನಿಜವಾಗಲಿದೆ !

KannadaprabhaNewsNetwork | Updated : May 09 2025, 03:53 AM IST

ಪಾಕಿಸ್ತಾನ ತನ್ನ ಹುಚ್ಚತನ ಬಿಡದಿದ್ದರೆ, ಕೋಡಿ ಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಲಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಗದಗ: ಪಾಕಿಸ್ತಾನ ತನ್ನ ಹುಚ್ಚತನ ಬಿಡದಿದ್ದರೆ, ಕೋಡಿ ಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಲಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಇಲ್ಲಿ ಮಾಜಿ ಸೈನಿಕರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದರು. ಕೋಡಿ ಮಠದ ಶ್ರೀಗಳು ಸದ್ಯದಲ್ಲಿಯೇ ಪ್ರಪಂಚದ ಭೂಪಟದಿಂದ ಒಂದು ದೇಶ ಕಣ್ಮರೆಯಾಗಲಿದೆ ಎಂದು ಹೇಳಿದ್ದರು.

 ಇದೇ ರೀತಿ ಪಾಕಿಸ್ತಾನ ಮತ್ತೊಂದು ಹೆಜ್ಜೆ ಮುಂದಿಟ್ಟರೆ, ಅದು ಸತ್ಯವಾಗಬಹುದು. ಭಾರತೀಯರು ಪಕ್ಷ ಭೇದ ಮರೆತು ಸೇನೆಯ ಬೆಂಬಲಕ್ಕೆ ನಿಲ್ಲಬೇಕು. ಪಾಕ್ ಇನ್ನೂ ಶಾಂತಿಯ ಹಾದಿ ಹಿಡಿಯುವ ಸಾಧ್ಯತೆ ಕಡಿಮೆ. ಅವರು ತಮ್ಮ ಉದ್ದಟತನ ಮುಂದುವರಿಸಿದರೆ ಭಾರತೀಯ ಸೇನೆ ಪಾಕಿಸ್ತಾನವನ್ನೇ ನಿರ್ನಾಮ ಮಾಡಬಹುದು ಎಂದರು.

ಪಹಲ್ಗಾಮ್ ದಾಳಿಯಲ್ಲಿ ಐಎಸ್‌ಐ, ಲಷ್ಕರ್ ಎ ತೊಯ್ಬಾ ಕೈವಾಡ ದೃಢ:

ಪಹಲ್ಗಾಮ್‌ನಲ್ಲಿ 26 ಜನ ಅಮಾಯಕರನ್ನು ಪತ್ನಿ, ಮಕ್ಕಳ ಎದುರು ಬಟ್ಟೆ ಬಿಚ್ಚಿಸಿ ಹಿಂದೂಗಳು ಅಂತ ತಿಳಿದ ಮೇಲೆ ಗುಂಡಿಟ್ಟ ದುರ್ಘಟನೆಯಲ್ಲಿ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಐಎಸ್‌ಐ, ಲಷ್ಕರ್ ಎ ತೊಯ್ಬಾ ಕೈವಾಡ ಇರುವುದನ್ನು ಎನ್‌ಐಎ ದೃಢಪಡಿಸಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೃತ್ಯಕ್ಕೆ ಪ್ರತೀಕಾರ ಬೇಕಿತ್ತು. ಇದಕ್ಕೆ ಸ್ಪಂದಿಸಿ ದುರ್ಘಟನೆಗೆ ಕಾರಣಿಕರ್ತರಾದವರನ್ನು ಹಾಗೂ ಅವರಿಗೆ ಬೆಂಬಲ ನೀಡಿದವರನ್ನು ಊಹೆಗೂ ಮಿರಿ ಶಿಕ್ಷೆ ಕೊಡುತ್ತೇವೆ ಅಂತ ಮೋದಿ ಹೇಳಿದ್ದರು.

ಅದರಂತೆ ತಡರಾತ್ರಿ ಉಗ್ರರಿಗೆ ತರಬೇತಿ ನೀಡುವ ಮನೆ, ಮಸೀದಿ ಹಾಗೂ 9 ಜಾಗಗಳನ್ನು ಗುರುತಿಸಿ ದಾಳಿ ಮಾಡಿದರು. ದಾಳಿ ಮುಗಿಸಿ ತಾಯ್ನಾಡಿಗೆ ಮರಳಿದ ಯೋಧರನ್ನು ಬಿಜೆಪಿ ಅಭಿನಂದಿಸುತ್ತದೆ ಎಂದರು.

ಮೂರು ಸೇನೆಯ ಮಹಾ ದಂಡನಾಯಕರು ಮೋದಿಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ ಮೂಲದ ಎರಡು ವಿಮಾನವನ್ನು ನಮ್ಮ ಸೇನೆ ಹೊಡೆದುರುಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸದ್ಯ ದೇಶದ ಎಲ್ಲ ದೇಶ ಪ್ರೇಮಿಗಳು ಸೈನಿಕರು ಕೇಂದ್ರ ಸರ್ಕಾರದ ಜೊತೆ ನಿಲ್ಲೋಣ‌ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಅನಿಲ ಅಬ್ಬಿಗೇರಿ, ಬಿಜೆಪಿ ಮಹೇಶ ದಾಸರ, ಪ್ರಶಾಂತ ನಾಯ್ಕರ ಸೇರಿದಂತೆ ಅನೇಕರು ಇದ್ದರು.