ಕನ್ನಡಪ್ರಭ ವಾರ್ತೆ ಅಥಣಿ
ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಬ್ಬಗಳನ್ನ ಆಚರಿಸಬೇಕು. ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳಲ್ಲಿ ಶಾಂತಿ ಸೌಹಾರ್ದತೆಯಿಂದ ಅಥಣಿ ಪಟ್ಟಣವು ಇತರೆ ಪಟ್ಟಣಗಳಿಗೆ ಮಾದರಿಯಾಗುವಂತೆ ಎಲ್ಲರೂ ಸಹಕಾರ ನೀಡಬೇಕು ಎಂದು ಅಥಣಿ ವಲಯದ ನೂತನ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಹೇಳಿದರು.ಅಥಣಿ ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿ, ಪಟ್ಟಣದ ವಿವಿಧ ಗಣೇಶ ಮಂಡಳಿ ಸದಸ್ಯರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅವರು ಕೂಡ ನಿಮ್ಮ ಜೊತೆ ಸಹಕಾರ ನೀಡುತ್ತಾರೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎಲ್ಲ ಇಲಾಖೆಯ ಪರವಾನಿಗೆಗಳನ್ನು ಪಡೆದಕೊಳ್ಳಬೇಕು. ಹಬ್ಬಗಳು ಸೌಹಾರ್ಧಯುತ ವಾಗಿ ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಯಮಗಳನ್ನು ಮೀರಿ ಶಾಂತಿಗೆ ಭಂಗ ತರುವವರ ವಿರುದ್ಧ ನಿರ್ದಾಕ್ಷಣವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅಥಣಿ ಸಿಪಿಐ ರವೀಂದ್ರ ನಾಯ್ಕೊಡಿ ಮಾತನಾಡಿ, ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ, ಡಾಲ್ಬಿ ಸೌಂಡ್ ಬಳಸುವುದಕ್ಕಿಂತ ಡೊಳ್ಳು ಕುಣಿತ, ಕೋಲಾಟ, ಕರಡಿ ಮಜಲು, ಜಾನಪದ ಕಲೆಗಳನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿ ಬೆಳೆಸಬೇಕು. ಗಣೇಶ ಹಬ್ಬದಲ್ಲಿ ಮತ್ತು ಈದ್ ಮಿಲಾದ್ ಸಂದರ್ಭಗಳಲ್ಲಿ ಸರ್ಕಾರದ ಮಾರ್ಗಸೂಚಿಗಳಂತೆ ಹಬ್ಬ ಆಚರಿಸುವಂತೆ ಸಲಹೆ ನೀಡಿದರು.ತಹಸೀಲ್ದಾರ್ ಸಿದ್ದರಾಯ ಬೋಸ್ಗಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ ಸಾರ್ವಜನಿಕರು ಪರಿಸರ ಸ್ನೇಹಿ , ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಹೆಸ್ಕಾಂನ ಮಹಾಂತೇಶ್ ಅಂಬೋಳೆ, ಅಗ್ನಿ ಶಾಮಕ ದಳದ ಅಧಿಕಾರಿ ಅನಿಲ್ ಬಡಚಿ, ಪಿಎಸ್ಐ ಶಿವಾನಂದ ಕಾರ್ಜೋಳ, ಅಪರಾಧ ವಿಭಾಗ ಪಿಎಸ್ಐ ಕೆ.ನಾಗರಾಜ್, ಹೆಚ್ಚುವರಿ ಪಿಎಸ್ಐ ಮಲಕನಗೌಡ ಬಿರಾದರ್, ಅಸ್ಲಂ ನಾಲಬಂದ, ಅಜಿತ್ ಪವಾರ್, ಶಶಿ ಸಾಳ್ವೆ, ಶಬ್ಬೀರ್ ಸಾತಬಚ್ಚೆ, ಹಣಮಂತ ಅರ್ಧವುರು, ಭರತೇಶ ಕಾಸಾರ್, ಸಿದ್ದು ಮಾಳಿ ಸೇರಿ ವಿವಿಧ ಗಣೇಶ ಮಂಡಳಿಯ ಮುಖಂಡರು ಉಪಸ್ಥಿತರಿದ್ದರು