ಕನ್ನಡಪ್ರಭ ವಾರ್ತೆ ಮೈಸೂರು
ಜೆಡಿಎಸ್ ನಾಯಕರಿಂದ ಮನವೊಲಿಕೆ ಯತ್ನ, ಬಂಡಾಯಕ್ಕೆ ಬೆಂಬಲಿಗರ ಪಟ್ಟು, ಉಭಯ ಗುಂಪಿನ ಕಾರ್ಯಕರ್ತರ ತಳ್ಳಾಟದಲ್ಲಿ ಕೆ.ಟಿ. ಶ್ರೀಕಂಠೇಗೌಡರ ಕೈಗೆ ಪೆಟ್ಟಾಗಿ ಆಸ್ಪತ್ರೆಗೆ, ಕೊನೆಗೂ ನಾಮಪತ್ರ ಸಲ್ಲಿಸಲಿಲ್ಲ- ಇದು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಪಟ್ಟವಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಜೆಡಿಎಸ್ ವಲಯದಲ್ಲಿ ನಡೆದ ವಿದ್ಯಮಾನಗಳು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡರು ಜೆಡಿಎಸ್ ಟಿಕೆಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷವು ಅರಣ್ಯ ವಸತಿ ಮತ್ತು ವಿಹಾರಧಾಮ ಮಾಜಿ ಅಧ್ಯಕ್ಷ ಕೆ. ವಿವೇಕಾನಂದ ಅವರಿಗೆ ಬಿ ಫಾರಂ ನೀಡಿತು. ಇದನ್ನು ವಿರೋಧಿಸಿ ಶ್ರೀಕಂಠೇಗೌಡರು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿದ್ದರು.ಹೀಗಾಗಿ ಅವರ ಮನವೊಲಿಕೆಗೆ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ
ಜಿ.ಟಿ. ದೇವೇಗೌಡರು ಸಂಧಾನಕ್ಕೆ ಮುಂದಾದರು. ಈ ವೇಳೆ ಜಿ.ಟಿ. ದೇವೇಗೌಡರನ್ನು ಶ್ರೀಕಂಠೇಗೌಡರ ಬೆಂಬಲಿಗರು ತಡೆದು ಆಕ್ರೋಶ ವ್ಯಕ್ತಪಡಿಸಿದರು.ಒಂದೆಡೆ ಜೆಎಲ್.ಬಿ ರಸ್ತೆಯ ಗೋವಿಂದರಾವ್ ಸ್ಮಾರಕ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರ ಬೃಹತ್ ಸಭೆ ಆಯೋಜಿಸಿದ್ದರೆ, ಮತ್ತೊಂದೆಡೆ ಕೆ.ಟಿ. ಶ್ರೀಕಂಠೇಗೌಡರು ಸಮೀಪದ ಶಿವರಾಮಪೇಟೆಯ ಆಲಮ್ಮ ಛತ್ರದಲ್ಲಿ ತಮ್ಮ ಬೆಂಬಲಿಗರ ಸಭೆ ಆಯೋಜಿಸಿದ್ದರು.
ಈ ವಿಷಯ ತಿಳಿದು ಸ್ವತಃ ಜಿ.ಟಿ. ದೇವೇಗೌಡರು, ಕೆ.ಟಿ. ಶ್ರೀಕಂಠೇಗೌಡರನ್ನು ಬಿಜೆಪಿ- ಜೆಡಿಎಸ್ ಸಭೆಗೆ ಕರೆತರುವುದಾಗಿ ಹೊರಟರು. ಇದನ್ನು ಮಾಜಿ ಸಚಿವ ಸಾ.ರಾ. ಮಹೇಶ್ ಎದುರು ನೋಡುತ್ತಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಇನ್ನೇನು ಕೆಲವೇ ಕ್ಷಣದಲ್ಲಿ ಕೆ.ಟಿ. ಶ್ರೀಕಂಠೇಗೌಡರನ್ನು ಶಾಸಕ ಜಿ.ಟಿ. ದೇವೇಗೌಡರು ಕರೆತರುತ್ತಿರುವುದಾಗಿ ಹೇಳಿದರು.ಆದರೆ ಅಷ್ಟರಲ್ಲಾಗಲೇ ಆಲಮ್ಮನ ಛತ್ರದ ಬಳಿ ಗಲಾಟೆ ಜೋರಾಯಿತು. ಕೆ.ಟಿ. ಶ್ರೀಕಂಠೇಗೌಡರ ಬೆಂಬಲಿಗರು ಮತ್ತು ಜಿ.ಟಿ. ದೇವೇಗೌಡರ ನಡುವೆ ಹೈಡ್ರಾಮ ನಡೆಯಿತು. ಜಿ.ಟಿ. ದೇವೇಗೌಡರಿಗೆ, ಕೆ.ಟಿ. ಶ್ರೀಕಂಠೇಗೌಡರ ಬೆಂಬಲಿಗರು ಘೇರಾವ್ ಮಾಡಿದರು. ಜೆಡಿಎಸ್- ಬಿಜೆಪಿ ಮೈತ್ರಿ ಕೂಟದ ಸಭೆಗೆ ತೆರಳದಂತೆ ಶ್ರೀಕಂಠೇಗೌಡರನ್ನೂ ತಡೆದರು. ಈ ವೇಳೆ ಕಾರ್ಯಕರ್ತರು ಪಕ್ಷದ ಪರವಾಗಿ ಮತ್ತು ಶ್ರೀಕಂಠೇಗೌಡರ ಪರ ಘೋಷಣೆ ಕೂಗಿದರು.ಅಂತಿಮ ಕ್ಷಣದಲ್ಲಿ ವಿವೇಕಾನಂದ ಅವರಿಗೆ ಜೆಡಿಎಸ್ ಬಿ ಫಾರಂ ನೀಡಿದ್ದರಿಂದ ಶ್ರೀಕಂಠೇಗೌಡರ ಬೆಂಬಲಿಗರು ಆಕ್ರೋಶಕ್ಕೆ ಒಳಗಾದರು. ಇದರಿಂದಾಗಿ ಶ್ರೀಕಂಠೇಗೌಡರ ಪ್ರತ್ಯೇಕ ಸಭೆಗೆ ಮುಂದಾಗಿದ್ದರು.
ಈ ವಿಷಯ ತಿಳಿದು ಬಂದ ಜಿ.ಟಿ. ದೇವೇಗೌಡ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರನ್ನು ಶ್ರೀಕಂಠೇಗೌಡರ ಬೆಂಬಲಿಗರು ಆಲಮ್ಮ ಛತ್ರದ ಒಳಗೆ ಹೋಗದಂತೆ ತಡೆದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಪಕ್ಷದ ಸಭೆಗೆ ಹೋಗಬೇಡಿ ಎಂದು ಬೆಂಬಲಿಗರು ಆಗ್ರಹಿಸಿದರು.ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದ್ದಂತೆಯೇ ಪಕ್ಷದ ನಾಯಕರುಗಳೇ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದರು. ತಳ್ಳಾಟ- ನೂಕಾಟ ಜೋರಾಯಿತು. ಈ ವಿಷಯ ತಿಳಿದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಕೂಡ ಆಲಮ್ಮನ ಛತ್ರದತ್ತ ಬಂದರು. ಆಗಲೂ ಗಲಾಟೆ ನಡೆಯುತ್ತಿತ್ತು. ಶ್ರೀಕಂಠೇಗೌಡರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು ಎಂಬ ಜಿ.ಟಿ. ದೇವೇಗೌಡರ ಬಯಕೆ ಈಡೇರಲಿಲ್ಲ. ಮೈತ್ರಿಕೂಟದ ಸಭೆಗೆ ಬರಿಗೈಯಲ್ಲಿ ಹಿಂದಿರುಗಿದರು.
-- ಆಸ್ಪತ್ರೆ ಸೇರಿ, ನಾಮಪತ್ರ ಸಲ್ಲಿಕೆಗೆ ಗೈರಾದ ಶ್ರೀಕಂಠೇಗೌಡ --ವಿಧಾನ ಪರಿಷತ್‌ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನಗರದ ಆಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾದರು. ನಗರದ ಶಿವರಾಮಪೇಟೆಯ ಆಲಮ್ಮನ ಛತ್ರದಲ್ಲಿ ನಡೆದ ಗಲಾಟೆಯ ವೇಳೆ ಕೈಗೆ ನೋವಾಗಿದೆ ಎಂದು ಶ್ರೀಕಂಠೇಗೌಡರು ಅಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾದರು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಗಲಾಟೆ ನಡೆಯಿತು. ಈ ವೇಳೆ ಆಲಮ್ಮನ ಛತ್ರದಿಂದ ನೇರವಾಗಿ ಆಸ್ಪತ್ರೆಗೆ ತೆರಳಿದ ಅವರು ಚಿಕಿತ್ಸೆಗೆ ದಾಖಲಾದರು. ತಳ್ಳಾಟದಲ್ಲಿ ಕೈಗೆ ನೋವಾಗಿದೆ ಎಂದು ಅವರು ತಿಳಿಸಿದರು.ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ ಅವರು ನಾಮಪತ್ರ ಸಲ್ಲಿಕೆಗೆ ಆಗಮಿಸಲಿಲ್ಲ. ಮೈತ್ರಿ ಕೂಟದ ಸಭೆಗೆ ತೆರಳುವ ಮನಸ್ಸಿನಲ್ಲಿದ್ದ ಶ್ರೀಕಂಠೇಗೌಡರಿಗೆ ಅಭಿಮಾನಿಗಳು ಅಡ್ಡಿಪಡಿಸಿದ್ದರು. ಒಟ್ಟಾರೆ ಪರೋಕ್ಷವಾಗಿ ಕಣದಿಂದ ಶ್ರೀಕಂಠೇಗೌಡರು ಹಿಂದೆ ಸರಿದರು.