ಧೈರ್ಯವಾಗಿ ಪ್ರಶ್ನಿಸಿದರೆ ಎಫ್‌ಐಆರ್ ಹಾಕ್ತಾರೆ: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork | Published : Feb 23, 2024 1:51 AM

ಸಾರಾಂಶ

ಎಸ್ಎಸ್ಎಲ್‌ಸಿ ವೇಳಾಪಟ್ಟಿಯಲ್ಲಿ ಶುಕ್ರವಾರ ಮಾತ್ರ ಮಧ್ಯಾಹ್ನ ಪರೀಕ್ಷೆ ನಡೆಸಲು ಮತ್ತು ಉಳಿದ ದಿನಗಳಲ್ಲಿ ಬೆಳಗ್ಗೆ ಪರೀಕ್ಷೆ ಗೊತ್ತುಪಡಿಸಿದ್ದಾರೆ.

ಸಂಡೂರು: ರಾಜ್ಯದ ಶಾಲೆಗಳ ಮೇಲಿನ ಶೀರ್ಷಿಕೆಯನ್ನು ಬದಲಾಯಿಸಿ, ಧೈರ್ಯವಾಗಿ ಪ್ರಶ್ನಿಸಿ ಎಂದು ಹೇಳುತ್ತಾರೆ. ಆದರೆ, ಪ್ರಶ್ನಿಸಿದರೆ ಎಫ್‌ಐಆರ್ ದಾಖಲಿಸುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ಶಾಲೆಗಳಲ್ಲಿನ ಶೀರ್ಷಿಕೆಯನ್ನು ಬದಲಾಯಿಸಿದ ಕ್ರಮವನ್ನು ಟೀಕಿಸಿದರು.

ಪಟ್ಟಣದ ಯಶವಂತ ವಿಹಾರ ಮೈದಾನದಲ್ಲಿ ಬುಧವಾರ ಯುವ ಬ್ರಿಗೇಡ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಇತ್ತೀಚೆಗೆ ಕೆಲವು ಆದೇಶಗಳನ್ನು ಹೊರಡಿಸುತ್ತಿದೆ. ಕೆಲವೇ ದಿನಗಳಲ್ಲಿ ಅವುಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಎಸ್ಎಸ್ಎಲ್‌ಸಿ ವೇಳಾಪಟ್ಟಿಯಲ್ಲಿ ಶುಕ್ರವಾರ ಮಾತ್ರ ಮಧ್ಯಾಹ್ನ ಪರೀಕ್ಷೆ ನಡೆಸಲು ಮತ್ತು ಉಳಿದ ದಿನಗಳಲ್ಲಿ ಬೆಳಗ್ಗೆ ಪರೀಕ್ಷೆ ಗೊತ್ತುಪಡಿಸಿದ್ದಾರೆ. ಹಾಗೆಯೇ ಜನರ ಹಣದಲ್ಲಿ ಕಲಬುರಗಿಯಲ್ಲಿ ಕಟ್ಟಿಸಿದ ಆಸ್ಪತ್ರೆ ಮೇಲೆ ಖರ್ಗೆ ಹೆಸರಿದೆ. ಇದನ್ನು ಪ್ರಶ್ನಿಸಿದರೆ, ನನ್ನ ಮೇಲೆ ಎಫ್ಐಆರ್ ದಾಖಲಿಸುತ್ತಾರೆ ಎಂದು ರಾಜ್ಯ ಸರ್ಕಾರದ ನಡೆಯ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕೊರೋನಾ ಸಂದರ್ಭದಲ್ಲಿ ಉಚಿತವಾಗಿ ವ್ಯಾಕ್ಸಿನ್ ಒದಗಿಸಿ, ನಮ್ಮ ಬದುಕು ಉಳಿಸಿ, ದೇಶ ರಕ್ಷಿಸಿದವರು ದೇಶದ ಪ್ರಧಾನಿ ನರೇಂದ್ರ ಮೋದಿಯವರು. ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಒಂದೂ ಹಗರಣ ಇಲ್ಲ ಎಂದರು.

ಕಾಂಗ್ರೆಸ್‌ನವರು ರಾಮ ಮಂದಿರದ ಕ್ರೆಡಿಟ್ ಅನ್ನು ಬಿಜೆಪಿ ಪಡೆಯುತ್ತಿದೆ ಎಂದು ದೂರುತ್ತಿದ್ದಾರೆ. ರಥಯಾತ್ರೆಯಿಂದ ಹಿಡಿದು ರಾಮಮಂದಿರದ ನಿರ್ಮಾಣದವರೆಗೆ ಎಲ್ಲ ಕೆಲಸವನ್ನು ಬಿಜೆಪಿ ಮಾಡಿದೆ. ಹೀಗಾಗಿ ಬಿಜೆಪಿ ಕ್ರೆಡಿಟ್ಪ ಪಡೆದರೆ ತಪ್ಪೇನು? ಕಾಂಗ್ರೆಸ್ ಈ ಬಾರಿಯ ಚುನಾವಣೆಯ ಪ್ರಣಾಳಿಕೆಯಲ್ಲಿ ಮಥುರಾದ ಕೃಷ್ಣಮಂದಿರ ವಿಷಯವನ್ನು ಪ್ರಕಟಿಸಿ, ಕಾರ್ಯರೂಪಕ್ಕೆ ತಂದು ಅದರ ಕ್ರೆಡಿಟ್ ಅನ್ನು ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.

ವರ್ಧಮಾನ್ ತ್ಯಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಿಲ್ಪಾ ರಾಘವೇಂದ್ರ, ಪುಷ್ಪಾ, ಬಿಜೆಪಿ ಸಂಡೂರು ಮಂಡಲದ ಅಧ್ಯಕ್ಷ ನಾನಾ ನಿಕ್ಕಂ, ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಮುಖಂಡರಾದ ಉಡೇದ್ ಸುರೇಶ್, ಪ್ರಶಾಂತ್, ನಾಗರಾಜ, ಔದುಂಬರ ಭಟ್ ಮುಂತಾದವರು ಉಪಸ್ಥಿತರಿದ್ದರು. ಸ್ಥಳೀಯ ಸರಸ್ವತಿ ಸಂಗೀತ ವಿದ್ಯಾಲಯದ ಮುಖ್ಯಸ್ಥರಾದ ಸಹನಾ ಹಾಗೂ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು.

Share this article