ರೇಬಿಸ್ ಬಂದರೆ ಸಾವು ಖಚಿತ, ಜಾಗ್ರತೆ ಅಗತ್ಯ: ಡಿಎಚ್‌ಒ ಡಾ.ನಟರಾಜ್ ಎಚ್ಚರಿಕೆ

KannadaprabhaNewsNetwork |  
Published : Oct 02, 2024, 01:20 AM IST
ಪೊಟೋ: 1ಎಸ್‌ಎಂಜಿಕೆಪಿ01ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಎನ್.ಸಿ.ಡಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ನಂಜಪ್ಪ ಗ್ರೂಪ್ ಆಫ್ ಹಾಸ್ಪಿಟಲ್ ಮತ್ತು ಎಜುಕೇಷನ್ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನ ಮತ್ತು ವಿಶ್ವ ಹೃದಯ ದಿನವನ್ನು ಡಿಎಚ್‌ಒ ಡಾ.ನಟರಾಜ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲಾಡಳಿತದ ವತಿಯಿಂದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ವಿಶ್ವ ರೇಬಿಸ್ ದಿನ ಮತ್ತು ವಿಶ್ವ ಹೃದಯ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರೇಬಿಸ್ ಕಾಯಿಲೆ ಬಂದರೆ ಸಾವು ಖಚಿತ. ಆದ್ದರಿಂದ ಎಲ್ಲರೂ ನಾಯಿ ಮತ್ತು ಇತರೆ ಪ್ರಾಣಿಗಳ ಕಡಿತದಿಂದ ದೂರ ಇರಬೇಕು. ಕೇವಲ ಕಡಿತ ಮಾತ್ರವಲ್ಲ ತರಚಿದ್ದರೂ ಆ್ಯಂಟಿ ರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಡಿಎಚ್‌ಒ ಡಾ.ನಟರಾಜ್ ಎಚ್ಚರಿಸಿದರು.

ಇಲ್ಲಿನ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಎನ್.ಸಿ.ಡಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ನಂಜಪ್ಪ ಗ್ರೂಪ್ ಆಫ್ ಹಾಸ್ಪಿಟಲ್ ಮತ್ತು ಎಜುಕೇಷನ್ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನ ಮತ್ತು ವಿಶ್ವ ಹೃದಯ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲ ನಾಯಿ ಮತ್ತು ಇತರೆ ಪ್ರಾಣಿಗಳನ್ನು ಪ್ರೀತಿಸುತ್ತೇವೆ. ಅವೂ ನಮ್ಮನ್ನು ಪ್ರೀತಿಸುತ್ತವೆ. ಆದರೆ ನಾಯಿಗಳು /ಪ್ರಾಣಿಗಳು ಕೆಲವೊಮ್ಮೆ ಅಪಾಯಕಾರಿಯೂ ಆಗಿರುತ್ತವೆ. ಆದ್ದರಿಂದ ನಾವು ಸಾಕಿದ ನಾಯಿಗಳಿಗೆ ಮತ್ತು ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ನಿಯಮಿತವಾಗಿ ಕೊಡಿಸಬೇಕು. ರೇಬಿಸ್ ಬಂದ ನಂತರ ಅದಕ್ಕೆ ಚಿಕಿತ್ಸೆ ಇಲ್ಲ. ಸಾವು ಖಚಿತ. ಆದರಿಂದ ಮುನ್ನೆಚ್ಚರಿಕೆ ಅತಿ ಅಗತ್ಯ. ನಾಯಿ, ಬೆಕ್ಕು ಇತರೆ ಪ್ರಾಣಿಗಳು ಕಡಿದರೆ, ತರಚಿದರೂ ನಿರ್ಲಕ್ಷ್ಯ ಮಾಡದೇ ಆಂಟಿ ರೇಬಿಸ್ ಲಸಿಕೆ ಪಡೆಯಬೇಕು ಎಂದರು.

ಭಾನುವಾರ ಶಿಕಾರಪುರಿದಲ್ಲಿ ಹುಚ್ಚು ನಾಯಿಯೊಂದು 41 ಜನರನ್ನು ಕಚ್ಚಿದೆ. ಆ ನಾಯಿ ಕಚ್ಚಿದ ಎಲ್ಲರಿಗೆ ಆಂಟಿ ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಲಸಿಕೆ ನೀಡ ಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 4 ಜನರು ನಾಯಿ ಕಡಿತದಿಂದ ಸಾವನ್ನಪ್ಪಿದ್ದಾರೆ. ಇನ್ನು ಹೃದಯದ ಆರೋಗ್ಯಕ್ಕಾಗಿ ಒತ್ತಡ ನಿರ್ವಹಣೆ ಮಾಡಬೇಕು. ನಿಯಮಿತವಾಗಿ ವ್ಯಾಯಾಮ, ಧ್ಯಾನ, ಹಾಗೂ ಸಾಕಷ್ಟು ವಿಶ್ರಾಂತಿ ಅಗತ್ಯ. ಇತ್ತೀಚಿನ ದಿನ ಗಳಲ್ಲಿ ಯುವಜನತೆ ಹೃದಯಾಘಾತದಿಂದ ಹೆಚ್ಚು ಸಾವನ್ನಪ್ಪುತ್ತಿದ್ದು, ಉತ್ತಮ ಜೀವನ ಶೈಲಿ, ಆಹಾರ ಕ್ರಮ, ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ನಾವು ನಾಯಿ ಕಡಿತದಿಂದ ದೂರ ಇರಬೇಕು. ಬೆಕ್ಕು ಕಡಿತದಿಂದಲೂ ಎರಡು ಸಾವಾಗಿದೆ. ಆದ್ದರಿಂದ ರೇಬಿಸ್ ಖಾಲಿಯೆ ಬಗ್ಗೆ ಜಾಗೃತರಾಗಿರಬೇಕು. ರೇಬಿಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಆರ್‌ಸಿಎಚ್‌ಒ ಡಾ.ಓ.ಮಲ್ಲಪ್ಪ ಮಾತನಾಡಿ, ರೇಬಿಸ್ ಬಂದ ಮೇಲೆ ಬದುಕಲು ಸಾಧ್ಯವಿಲ್ಲ. ನಾಯಿ ಕಡಿತ ಆದ ತಕ್ಷಣ ನಿರ್ಲಕ್ಷಿಸದೇ ಲಸಿಕೆ ಪಡೆಯಬೇಕು. 28 ದಿನದಲ್ಲಿ 4 ಡೋಸ್‌ಗಳನ್ನು ಪಡೆಯಲೇಬೇಕು. ವರ್ಷದಲ್ಲಿ 25 ರಿಂದ 30 ಸಾವಿರ ನಾಯಿ ಕಡಿತ ಪ್ರಕರಣ ಸಂಭವಿಸುತ್ತಿದೆ ಎಂದರು.

ರೇಬಿಸ್ ಖಾಯಿಲೆ ಬಂದ ಎರಡು ಮೂರು ದಿನದಲ್ಲಿ ರೋಗಿ ಸಾಯುತ್ತಾನೆ. ಯಾವುದೇ ಪ್ರಾಣಿ ಕಚ್ಚಿದರೂ ರೇಬಿಸ್ ಬರಬಹುದು. ಶೇ. 97ರಷ್ಟು ನಾಯಿ ಕಡಿತ ದಿಂದ ಬಂದರೆ ಶೇ. 3ರಷ್ಟು ಬೆಕ್ಕು, ಕಾಡು ಪ್ರಾಣಿ ಕಚ್ಚುವಿಕೆಯಿಂದ ಬರುತ್ತದೆ. ಜನರಲ್ಲಿ, ನಾಯಿ ಮಾಲೀಕರಲ್ಲಿ ಈ ಬಗ್ಗೆ ಅರಿವು ಹೆಚ್ಚಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 17000 ಕ್ಕು ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ಕಡ್ಡಾಯ ವಾಗಿ ಟಿಟಿ ಮತ್ತು ಆಂಟಿ ರೇಬಿಸ್ ಲಸಿಕೆ ಪಡೆಯಬೇಕು. ಹಾಗೂ ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಬೇಂದರು.

ಡಾ.ಹರ್ಷವರ್ಧನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು. ಐಎಂಎ ಅಧ್ಯಕ್ಷ ಡಾ.ಶ್ರೀಧರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ದಿನೇಶ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಂಜಪ್ಪ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೆಗ್ಗಾನ್‌ನಲ್ಲಿ ಉತ್ತಮ ಚಿಕಿತ್ಸೆ, ಸೌಲಭ್ಯ

ಮೆಗ್ಗಾನ್ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ, ಸೌಲಭ್ಯಗಳು ಲಭ್ಯವಿದೆ. ಸುಸಜ್ಜಿತವಾದ ಕಾರ್ಡಿಯಾಲಜಿ ವಿಭಾಗ ಕೆಲಸ ನಿರ್ವಹಿ ಸುತ್ತಿದ್ದು, ಇದುವರೆಗೆ 2900 ಆಂಜಿಯೋಗ್ರಾಮ್, 900 ಆಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಎಬಿಎಆರ್‌ಕೆ ಮತ್ತು ಬಿಪಿಎಲ್ ಕಾರ್ಡು ಹೊಂದಿದವರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. 20 ಕಾರ್ಡಿಯಾಕ್ ಬೆಡ್ ಸೌಲಭ್ಯವಿದೆ. ಸಾಮಾನ್ಯ ವರ್ಗದವರಿಗೆ ಸಿಂಗಲ್ ಸ್ಟಂಟ್ ಅಳವಡಿಸಲು 88,000 ರು., ಡಬಲ್ 1,28,000 ಮತ್ತು ತ್ರಿಬಲ್ ಸ್ಟಂಟ್ ಅಳವಡಿಕೆಗೆ 1,48,000 ರು. ವೆಚ್ಚ ತಗುಲಿದೆ ಎಂದು ಮೆಗ್ಗಾನ್ ಬೋಧನಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ