ಕನ್ನಡಪ್ರಭ ವಾರ್ತೆ ವಿಜಯಪುರ
ಶಾಲೆಗಳಿಗೆ ಶಿಕ್ಷಕರು ಹೃದಯವಿದ್ದ ಹಾಗೆ, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು ಶಿಕ್ಷಕರು ಯೋಜನಾ ಬದ್ಧವಾಗಿ ಪಾಠ ಬೋಧನೆಗೆ ಆದ್ಯತೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕರೆ ನೀಡಿದರು.ನಗರದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಗ್ರಾಮೀಣ ವಲಯದ ಎಸ್‌ಎಸ್‌ಎಲ್‌ಸಿ 2026 ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಪುನಶ್ಚೇತನ ಕಾರ್ಯಾಗಾರ ಹಾಗೂ ತಾಲೂಕು ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಪಾಲಕರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಮಕ್ಕಳ ಶೈಕ್ಷಣಿಕ ಮಟ್ಟದ ಬೆಳವಣಿಗೆಗಾಗಿ ಪಾಲಕರು, ಶಿಕ್ಷಕರು ವಿಶೇಷ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ ಅವಶ್ಯಕ ವಾತಾವರಣ ನಿರ್ಮಿಸಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವತ್ತ ಎಲ್ಲರೂ ಶ್ರಮಿಸಬೇಕು. ಕಲಿಕಾ ಮಟ್ಟ ಹೆಚ್ಚಿಸಲು ಶ್ರಮಿಸಬೇಕು. ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಒಟ್ಟಾರೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ಜವಾಬ್ದಾರಿ ತೆಗೆದುಕೊಂಡು ಶಿಕ್ಷಕರು, ಅಧಿಕಾರಿಗಳು ಶ್ರಮಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹಾಗೂ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ಕೈ ಜೋಡಿಸಬೇಕು ಎಂದರು.ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಸಚಿವರ ಆಶಯದಂತೆ ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ಸುಸಜ್ಜಿತ ಸ್ಮಾರ್ಟಕ್ಲಾಸ್ ಕೊಠಡಿಗಳನ್ನು ನಿರ್ಮಾಣ ಮಾಡಿ, ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ ಪ್ರೊತ್ಸಾಹಿಸಲಾಗುತ್ತಿದೆ. ವಿಜಯಪುರ ಗ್ರಾಮೀಣ ವಲಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದರು.
2024-25ನೇ ಸಾಲಿನಲ್ಲಿ ತಾಲೂಕಾ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರಗಳ ಚೆಕ್ ಹಾಗೂ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕ ಮಟ್ಟದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೀರಯ್ಯ ಸಾಲಿಮಠ, ಡಯಟ್ ಪ್ರಾಂಶುಪಾಲೆ ಉಮಾದೇವಿ ಸೊನ್ನದ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವರಾಜ ಬಿರಾದಾರ, ಅಶೋಕ ಮಲಘಾಣ, ಕೆ.ಬಿ.ಪಾಟೀಲ ವಿವಿಧ ಗ್ರಾಮೀಣ ವಲಯದ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿ, ಅವರು ಉನ್ನತ ಶಿಕ್ಷಣ ಪಡೆದು ಸಾಧಕರಾಗಿ ಹೊರ ಹೊಮ್ಮಲು ಉತ್ತಮ ಕಲಿಕಾ ಅವಕಾಶ ಕಲ್ಪಿಸಿಕೊಟ್ಟು, ಉತ್ತಮ ಬೋಧನಾ ಕ್ರಮ ಅನುಸರಿಸಿ ಅವರು ಅಧ್ಯಯನಶೀಲತೆ ರೂಢಿಸಿಕೊಳ್ಳಲು ಪ್ರೇರೆಪಿಸಬೇಕು. ಮಕ್ಕಳು ಭವಿಷ್ಯದಲ್ಲಿ ಉನ್ನತ ಹುದ್ದೆ ಹೊಂದಲು ಶಿಕ್ಷಕರ ಪಾತ್ರ ಬಹುದೊಡ್ಡದಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ಸಿದ್ಧಗೊಳಿಸಬೇಕು.ಡಾ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು
ವಿದ್ಯಾರ್ಥಿಗಳು ಪ್ರೇರಣೆ ಹೊಂದಿ, ಆಸಕ್ತಿಯನ್ನು ಮೈಗೂಡಿಸಿಕೊಂಡು ಏಕಾಗ್ರತೆ ಸಾಧಿಸಿಕೊಳ್ಳುವ ಮೂಲಕ ನೆನಪಿನಶಕ್ತಿ ಹೆಚ್ಚಿಸಿಕೊಳ್ಳಬೇಕು. ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಂಡು, ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ ಬಿರಾದಾರ ಹೇಳಿದರು.