ರಾಮನಗರ: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಐಪಿಎಸ್ ಅಧಿಕಾರಿ ಚಂದ್ರಶೇಖರ್ ಸರ್ಕಾರದ ಚಮಚದಂತೆ ವರ್ತಿಸುತ್ತಿದ್ದಾರೆ. ಕುಮಾರಸ್ವಾಮಿಯವರ ವಿರುದ್ಧ ಹಗುರವಾಗಿ ಮಾತನಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಅವರ ಭ್ರಷ್ಟಾಚಾರಗಳು ಮಿತಿ ಮೀರಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ ಮಾತನಾಡಿ, ಮುಖ್ಯಮಂತ್ರಿಗಳಿಗೆ ಇಷ್ಟವಿದ್ದರೆ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರನ್ನು ಕಾನೂನು ಸಲಹೆಗಾರರನ್ನಾಗಿ ಮಾಡಿಕೊಳ್ಳಲಿ. ಚಂದ್ರಶೇಖರ್ ಗೆ ಇಷ್ಟವಿದ್ದರೆ ಖಾಕಿ ಕಳಚಿ ರಾಜಕಾರಣಕ್ಕೆ ಬರಲಿ. ಸರ್ಕಾರವನ್ನು ಓಲೈಸಲು ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.ಚಂದ್ರಶೇಖರ್ ರವರ ವಿರುದ್ಧ ಅಧಿಕಾರ ದುರುಪಯೋಗ, ಸುಲಿಗೆ, ಬ್ಲ್ಯಾಕ್ ಮೇಲೆ ಇನ್ನಿತರ ಆರೋಪಗಳು ಕೇಳಿ ಬಂದಿವೆ. ಇದೇ ರೀತಿಯಾಗಿ ವರ್ತನೆ ಮುಂದುವರೆಸಿದರೆ ಮಾನನಷ್ಟ ಮೊಕದ್ದಮೆ, ಅಧಿಕಾರ ದುರುಪಯೋಗ, ಹಕ್ಕುಚ್ಯುತಿಯಂತಹ ಕಾನೂನು ಹೋರಾಟಗಳನ್ನು ಜೆಡಿಎಸ್ ವತಿಯಿಂದ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವರ ಬಗ್ಗೆ ಬಳಸಿರುವ ವಾಕ್ಯವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ, ಕಾಂಗ್ರೆಸ್ ನಾಯಕರು ನೇರವಾಗಿ ಕುಮಾರಸ್ವಾಮಿಯವರ ವಿರುದ್ಧ ಮಾತನಾಡದೆ ಜನರ ತೆರಿಗೆ ಹಣದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳಿಂದ ಕುಮಾರಸ್ವಾಮಿ ವಿರುದ್ಧ ಮಾತನಾಡಿಸುತ್ತಿರುವುದು ಅನುಮಾನ ಮೂಡುವಂತಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಮಂಜುನಾಥ್, ಉಮೇಶ್, ಕುಮಾರ್ ಗೂಳಿಗೌಡ, ರವಿ, ವೆಂಕಟೇಶ್, ಗ್ಯಾಬ್ರಿಯಲ್ , ಜಯಕುಮಾರ್ , ಗೋವಿಂದರಾಜು, ವಾಸು ನಾಯಕ್ , ಪಾಂಡು, ಬಿಜೆಪಿ ಮುಖಂಡರಾದ ಮುರಳೀಧರ್, ದರ್ಶನ್ ರೆಡ್ಡಿ, ಶಿವಾನಂದ, ಪದ್ಮನಾಭ, ಮಂಜು ಮತ್ತಿತರರು ಭಾಗವಹಿಸಿದ್ದರು.