ಸನಾತನ ಧರ್ಮದ ರಕ್ಷಣೆಯಾದರೆ ನಮ್ಮೆಲ್ಲರ ರಕ್ಷಣೆ

KannadaprabhaNewsNetwork | Published : Nov 13, 2024 12:53 AM

ಸಾರಾಂಶ

ಸನಾತನ ಧರ್ಮದ ರಕ್ಷಣೆಯಾದರೆ ನಮ್ಮೆಲ್ಲರ ರಕ್ಷಣೆಯಾಗುತ್ತದೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸನಾತನ ಧರ್ಮ, ದೇವತಾರ್ಚನೆ, ಅನುಷ್ಠಾನಗಳನ್ನು ತಪ್ಪದೇ ವಿಶ್ವಾಸದಿಂದ ಮಾಡಬೇಕು ಎಂದು ಉತ್ತರಾಧಿಮಠಾಧೀಶ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ನುಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸನಾತನ ಧರ್ಮದ ರಕ್ಷಣೆಯಾದರೆ ನಮ್ಮೆಲ್ಲರ ರಕ್ಷಣೆಯಾಗುತ್ತದೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸನಾತನ ಧರ್ಮ, ದೇವತಾರ್ಚನೆ, ಅನುಷ್ಠಾನಗಳನ್ನು ತಪ್ಪದೇ ವಿಶ್ವಾಸದಿಂದ ಮಾಡಬೇಕು ಎಂದು ಉತ್ತರಾಧಿಮಠಾಧೀಶ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ನುಡಿದರು.

ತಾಲೂಕಿನ ಶೂರ್ಪಾಲಯ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಧರ್ಮೋರಕ್ಷತಿ ರಕ್ಷಿತಃ ಎಂಬ ವೇದ ವಾಕ್ಯದಂತೆ ಎಲ್ಲ ಸನಾತನಿಗಳು ಧರ್ಮಾಚರಣೆಯಿಂದ ಇರಬೇಕು ಎಂದರು.ನಾಸ್ತಿಕರು, ವಿಚಾರವಾದಿಗಳೆಂದು ಹೇಳಿಕೊಂಡು ಧರ್ಮಾಚರಣೆಯ ವಿರುದ್ಧ ಮಾತನಾಡುವರ ಮಾತಿಗೆ ಮರುಳಾಗಿ ಧರ್ಮ ಬಿಡಬಾರದು. ಧರ್ಮದಿಂದ ಮಹಾಫಲ ಲಭಿಸುತ್ತದೆ. ಶ್ರೀಕೃಷ್ಣ ಪರಮಾತ್ಮ, ಶ್ರೀರಾಮದೇವರನ್ನು ಪರಿವಾರ ದೇವತೆಗಳನ್ನು, ಹನುಮಂತ ದೇವರು, ಮಹಾರುದ್ರ ದೇವರನ್ನು ಭಕ್ತಿಯಿಂದ ಎಲ್ಲರೂ ಆರಾಧನೆ ಮಾಡಬೇಕು. ದೇಶದಲ್ಲಿಯ ಎಲ್ಲ ಸಜ್ಜನರ ಸುಭದ್ರತೆಗೆ, ಸುಖಕರವಾದ ಜೀವನಕ್ಕೆ ಪ್ರಾರ್ಥನೆ, ಜಪ, ಪಾರಾಯಣಗಳನ್ನು ಮಾಡಬೇಕಾದ ಅವಶ್ಯಕತೆ ಬಹಳ ಇದೆ ಎಂದು ತಿಳಿಸಿದರು.ಅನಾದಿಕಾಲದಿಂದ ನಡೆದು ಬಂದ ದೇವರು ಪೂಜೆ, ಕರ್ಮಾನುಷ್ಠಾನವನ್ನು ಗುರುಗಳಿಂದ ಚೆನ್ನಾಗಿ ತಿಳಿದುಕೊಂಡು ಶೃಧ್ದೆಯಿಂದ ಆಚರಣೆ ಮಾಡಬೇಕು. ಅದರಿಂದ ಲೋಕ ಕಲ್ಯಾಣವಾಗುತ್ತದೆ. ಸಜ್ಜನರ ರಕ್ಷಣೆಯಾಗುತ್ತದೆ. ತ್ರಿಕಾಲ ಜ್ಞಾನಿಗಳು, ಋಷಿಗಳು, ಮುನಿಗಳು ಲೋಕಕಲ್ಯಾಣಕ್ಕೆ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಆಚಾರ, ವಿಚಾರ, ಪರಂಪರೆಯನ್ನು ತಿಳಿದುಕೊಂಡು ಸದಾಚಾರಿಗಳಾಗಿ ಸಮಾಜದಲ್ಲಿ ಬಾಳಬೇಕು.ಧರ್ಮದ ರಕ್ಷಣೆಗಾಗಿ ವಿಷೇಶವಾಗಿ ದೇವರಲ್ಲಿ ಪ್ರಾರ್ಥನೆ ಜಪ ಪಾರಾಯಣ ಮಾಡಬೇಕು. ಸನಾತನಿಗಳು ಸುಖವಾಗಿರಬೇಕು ಎಂದು ದೇವರಲ್ಲಿ ಪ್ರಾರ್ಥಿಸಬೇಕು ಎಂದು ತಿಳಿಸಿದರು.ಸಂಜೆ ಪೂಜೆ:

ಉತ್ತರಾಧಿಮಠದ 3ನೇ ಪೀಠಾಧಿಪತಿಗಳಾಗಿದ್ದ ನರಹರಿತೀರ್ಥರು ಈಗಿನ ಓಡಿಸ್ಸಾದ ಗಜಪತಿ ಸಂಸ್ಥಾನದಿಂದ ಬ್ರಹ್ಮಕರಾರ್ಚಿತ ಶ್ರೀಮನ್‌ಮೂಲ ರಾಮದೇವರ, ಮೂಲ ಸೀತಾದೇವಿಯರ ವಿಗ್ರಹಗಳನ್ನು ತಂದು ಶ್ರೀ ಮಧ್ವಾಚಾರ್ಯರಿಗೆ ಕಾರ್ತಿಕ ಶುದ್ಧ ದ್ವಾದಶಿಯ ದಿನದಂದು ಸಂಜೆ ಹೊತ್ತಿನಲ್ಲಿ ಸಮರ್ಪಣೆ ಮಾಡಿದ್ದಾರೆ. ಆದಿನದಿಂದ ಶ್ರೀಮೂಲರಾಮ ದೇವರಿಗೆ ಶ್ರೀಮಠದಲ್ಲಿ ಸಂಜೆಯ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶೂರ್ಪಾಲಯದಲ್ಲಿ ತುಳಸಿ ವಿವಾಹ, ಮೂಲರಾಮದೇವರ ಪೂಜಾದಿ ಕಾರ್ಯಕ್ರಮಗಳು ಬುಧವಾರ ಸಂಜೆ ನಡೆಯಲಿದೆ ಎಂದು ವಿವರಿಸಿದರು. ಶ್ರೀಮಠದ ದಿವಾನ ಶಶಿ ಆಚಾರ್ಯ, ಮಠದ ಪಂಡಿತರು ಭಕ್ತರು ಇದ್ದರು. ತಪ್ತಮುದ್ರಾಧಾರಣೆ, ಶ್ರೀಮಠದ ಸಂಸ್ಥಾನ ಪೂಜೆಗಳು ನಡೆದವು.ನಾಸ್ತಿಕರು, ವಿಚಾರವಾದಿಗಳೆಂದು ಹೇಳಿಕೊಂಡು ಧರ್ಮಾಚರಣೆಯ ವಿರುದ್ಧ ಮಾತನಾಡುವರ ಮಾತಿಗೆ ಮರುಳಾಗಿ ಧರ್ಮ ಬಿಡಬಾರದು. ಧರ್ಮದಿಂದ ಮಹಾಫಲ ಲಭಿಸುತ್ತದೆ. ಶ್ರೀಕೃಷ್ಣ ಪರಮಾತ್ಮ, ಶ್ರೀರಾಮದೇವರನ್ನು ಪರಿವಾರ ದೇವತೆಗಳನ್ನು, ಹನುಮಂತ ದೇವರು, ಮಹಾರುದ್ರ ದೇವರನ್ನು ಭಕ್ತಿಯಿಂದ ಎಲ್ಲರೂ ಆರಾಧನೆ ಮಾಡಬೇಕು. ದೇಶದಲ್ಲಿಯ ಎಲ್ಲ ಸಜ್ಜನರ ಸುಭದ್ರತೆಗೆ, ಸುಖಕರವಾದ ಜೀವನಕ್ಕೆ ಪ್ರಾರ್ಥನೆ, ಜಪ, ಪಾರಾಯಣಗಳನ್ನು ಮಾಡಬೇಕಾದ ಅವಶ್ಯಕತೆ ಬಹಳ ಇದೆ.

-ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು,

ಉತ್ತರಾಧಿ ಮಠಾಧೀಶರು.

Share this article