ಸ್ಕೋಲಿಯೋಸಿಸ್ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಪಡೆಯಿರಿ: ಡಿಎಚ್‌ಓ ಡಾ.ಶಂಕರ್‌ ನಾಯ್ಕ

KannadaprabhaNewsNetwork | Published : Feb 19, 2025 12:50 AM

ಸಾರಾಂಶ

ಸ್ಕೋಲಿಯೋಸಿಸ್ ಬೆನ್ನು ಮೂಳೆಯ ಪಕ್ಕದ ವಕ್ರರೇಖೆಯ ಲಕ್ಷಣಗಳು ಪತ್ತೆಯಾದರೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು.

ಬೆನ್ನು ಮೂಳೆಯ ನ್ಯೂನತೆ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸ್ಕೋಲಿಯೋಸಿಸ್ ಬೆನ್ನು ಮೂಳೆಯ ಪಕ್ಕದ ವಕ್ರರೇಖೆಯ ಲಕ್ಷಣಗಳು ಪತ್ತೆಯಾದರೆ ವೈದ್ಯರ ಬಳಿ ಸೂಕ್ತ ಚಿಕಿತ್ಸೆಗೆ ಮುಂದಾಗಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ್ ನಾಯ್ಕ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆನ್ನು ಮೂಳೆಯ ನ್ಯೂನತೆ ಶಿಬಿರ ಉದ್ಘಾಟಿಸಿ ಮಂಗಳವಾರ ಮಾತನಾಡಿದ ಅವರು, ಪ್ರತಿಯೊಬ್ಬರ ಬೆನ್ನು ಮೂಳೆಯು ಸಾಮಾನ್ಯವಾಗಿ ವಕ್ರರೇಖೆಗಳನ್ನು ಹೊಂದಿರುತ್ತದೆ. ಹಿಂದಿನಿಂದ ನೋಡಿದಾಗ, ಬೆನ್ನುಮೂಳೆ ನೇರವಾಗಿ ಕಾಣುತ್ತದೆ. ಆದಾಗ್ಯೂ ಸ್ಕೋಲಿಯೋಸಿಸ್ ಇರುವ ಮಕ್ಕಳು ಮತ್ತು ಹದಿಹರೆಯದವರು ಬೆನ್ನುಮೂಳೆಯ ಅಸಹಜ ಎಸ್. ಆಕಾರದ ಮತ್ತು ಸಿ. ಆಕಾರದ ವಕ್ರರೇಖೆ ಹೊಂದಿರುತ್ತಾರೆ. ಬೆನ್ನುಮೂಳೆ ಕಾಯಿಲೆಯ ಲಕ್ಷಣ ಮತ್ತು ಅವರಿಗೆ ಅವಶ್ಯವಿರುವ ಆರೈಕೆ ಮತ್ತು ವೈದ್ಯಕೀಯ ಸಲಹೆಗಳ ಬಗ್ಗೆ ತಿಳಿಸುವುದರ ಉದ್ದೇಶ ಈ ಶಿಬಿರದ್ದಾಗಿದೆ ಎಂದರು.ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯಲ್ಲಿ ಕಾಯಿಲೆಗೆ ಗುರಿಯಾಗಿರುವ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡು ಉತ್ತಮವಾದ ಭವಿಷ್ಯ ಪಡೆದುಕೊಳ್ಳಬೇಕು. ಚಿಕಿತ್ಸೆಯಲ್ಲಿ ಯಾವುದೇ ತೊಂದರೆಗಳಾಗದಂತೆ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡುತ್ತಾರೆ. ಹಣಕಾಸಿನ ತೊಂದರೆ ತುಂಬಾ ಜನರಲ್ಲಿ ಕಂಡುಬರುವುದರಿಂದ ಈ ಒಂದು ಸಂಸ್ಥೆಯ ಸಮಾಜ ಸೇವೆಯ ಮೂಲಕ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ 450 ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ ಎಂದರು.

ಬಳಿಕ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಘವೇಂದ್ರರಾವ್ ಮಾತನಾಡಿ, ನಮ್ಮಲ್ಲಿ 8 ಜನ ನುರಿತ ವೈದ್ಯಾಧಿಕಾರಿಗಳಿದ್ದು, 2016ರಿಂದ ಚಿಕಿತ್ಸೆ ಪ್ರಾರಂಭಿಸಿದ್ದೇವೆ. ಈ ಚಿಕಿತ್ಸೆಗೆ ನಾಲ್ಕರಿಂದ ಐದು ಲಕ್ಷ ರು.ಗಳಷ್ಟು ವೆಚ್ಚವಾಗುತ್ತದೆ. ಆದರೆ ನಮ್ಮ ಸಂಸ್ಥೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಒಂದು ಚಿಕಿತ್ಸೆಗೆ ಒಳಗಾದ ಮಕ್ಕಳಿಗೆ ಉಚಿತ ಸೇವೆ ನೀಡಲಾಗುತ್ತದೆ ಎಂದರು.

ಈ ವೇಳೆ ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Share this article