ಧಾರವಾಡ:
ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯು ಜಿಲ್ಲೆಯ ಏಳು ತಾಲೂಕುಗಳ ಸರ್ಕಾರಿ, ಅನುದಾನಿತ ಹಾಗೂ ಅನುದಾನಿತ ಪ್ರೌಢಶಾಲೆಗಳು ನಿರೀಕ್ಷಿತ ಫಲಿತಾಂಶ ಸಾಧಿಸದ ಮುಖ್ಯೋಪಾಧ್ಯಾಯರ ಹಾಗೂ ಎಲ್ಲ ಪ್ರೌಢಶಾಲೆಗಳ ನೋಡಲ್ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮವಹಿಸದ ಅನುದಾನಿತ, ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಹಿಂಪಡೆಯಲು ಶಾಲೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಶಾಲೆ ನವೀಕರಣ ಮಾಡುವಾಗ ಕೇವಲ ಭೌತಿಕ ಸೌಕರ್ಯ ಪರಿಗಣಿಸದೇ ಆ ಶಾಲೆಯ ಫಲಿತಾಂಶ ಹಾಗೂ ಗುಣಮಟ್ಟ ಪರಿಗಣಿಸುವಂತೆ ತಿಳಿಸಿದರು.ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಧಾರವಾಡ ಗ್ರಾಮೀಣ-2, ಧಾರವಾಡ ಶಹರ 8, ಹುಬ್ಬಳ್ಳಿ ಗ್ರಾಮೀಣ 4, ಹುಬ್ಬಳ್ಳಿ ಶಹರ 16, ಕಲಘಟಗಿ 1, ಕುಂದಗೋಳ 3, ನವಲಗುಂದ 3 ಸೇರಿದಂತೆ ಒಟ್ಟು 37 ಪ್ರೌಢಶಾಲೆಗಳಲ್ಲಿ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಇಂತಹ ಶಾಲೆಗಳ ಮಾನ್ಯತೆ ನವೀಕರಣ ಹಿಂಪಡೆಯಲು ಕ್ರಮವಹಿಸಬೇಕು. ಕಳೆದ ಹಾಗೂ ಪ್ರಸ್ತುತ ಪೂರ್ವಸಿದ್ಧತಾ ಪರೀಕ್ಷೆ-1 ಮತ್ತು ಪರೀಕ್ಷೆ-2 ರಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಮಾಡಿದ ಶಾಲೆಗಳಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣಗಳೇನು ಎಂಬುದನ್ನು ಪರಿಶೀಲಿಸಬೇಕು ಎಂದರು.
ಅನುಷ್ಠಾನಾಧಿಕಾರಿ ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮ್ಮ ವ್ಯಾಪ್ತಿಯ ಶಾಲೆಗಳಿಗೆ ನಿರಂತರ ಭೇಟಿ ನೀಡಿ, ಶೈಕ್ಷಣಿಕವಾಗಿ ಶಾಲೆಗಳ ಗುಣಾತ್ಮಕ ಶಿಕ್ಷಣ ಹೆಚ್ಚಿಸುವಲ್ಲಿ ಕ್ರಮವಹಿಸಬೇಕು. ಶಾಲಾ ಭೇಟಿ, ಸಂದರ್ಶನದ ವರದಿಗಳನ್ನು ತಮಗೆ ಸಲ್ಲಿಸಲು ಭುವನೇಶ ಪಾಟೀಲ ತಿಳಿಸಿದರು.ಜಿಲ್ಲೆಯ ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳು ಅತಿಥಿ ಶಿಕ್ಷಕರು ಸರಿಯಾದ ಬೋಧನೆ ಮಾಡುವಂತೆ ನಿಗಾವಹಿಸಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡದೇ ಇದ್ದಲ್ಲಿ ಅಂತಹ ಅತಿಥಿ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕರ್ತವ್ಯಕ್ಕೆ ಹಾಜರುಪಡಿಸಬಾರದು. 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತಿಥಿ ಶಿಕ್ಷಕರ ಹಾಗೂ ಸರ್ಕಾರಿ, ಅನುದಾನಿತ ಶಾಲಾ ಶಿಕ್ಷಕರ ಕಾರ್ಯನಿರ್ವಹಣೆ ಕುರಿತು ವಿಶ್ಲೇಷಣೆ ಮಾಡಿ, ಉಪನಿರ್ದೇಶಕರು ವರದಿ ಸಲ್ಲಿಸಬೇಕು. ಅತಿಥಿ ಶಿಕ್ಷಕರು ಅದೇ ಶಾಲೆಗಳಲ್ಲಿ ಎಷ್ಟು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ಉತ್ತಮವಾಗಿ ಕಾರ್ಯನಿರ್ವಹಿಸದೇ ಇರುವವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸಿಇಒ ಭುವನೇಶ ಪಾಟೀಲ ನಿರ್ದೇಶಿಸಿದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದರು.