ರಾಜ್ಯಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

KannadaprabhaNewsNetwork |  
Published : Jan 25, 2024, 02:03 AM IST
ಉಂಡೆ ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | Kannada Prabha

ಸಾರಾಂಶ

ತುಮಕೂರಿನಲ್ಲಿ 21 ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ

ಕನ್ನಡಪ್ರಭ ವಾರ್ತೆ ತುಮಕೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಜನಪರ ಯೋಜನೆಗಳ ಪರಿಣಾಮದಿಂದಾಗಿ ನಮಗೆ ಬೇಕಾದಷ್ಟು ಆಹಾರವನ್ನು ಬೆಳೆಯುವಷ್ಟು ನಮ್ಮ ರೈತರು ಶಕ್ತರಾಗಿದ್ದಾರೆ. ರೈತರು ಸಕಾಲಕ್ಕೆ ಮಳೆ ಇಲ್ಲದೆ, ಹವಾಮಾನ ವೈಪರಿತ್ಯದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ, ಆಹಾರ ಸಂಸ್ಕರಣಾ, ಕೈಗಾರಿಕೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ನಫೆಡ್ ಕರ್ನಾಟಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಸಹಯೋಗದಲ್ಲಿ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಎಲ್ಲಾ ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ರೈಲ್ವೆ, ಹೆದ್ದಾರಿ, ಸೇರಿದಂತೆ ಯಾವುದೇ ಯೋಜನೆಯಾದರೂ ಸರಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ. ಅಭಿವೃದ್ಧಿ ವಿಷಯದಲ್ಲಿ ಕೇಂದ್ರದ ನೆರವು ಸದಾ ಇರುತ್ತದೆ ಎಂದರು.

ಕೇಂದ್ರ ಸರ್ಕಾರವು ಕೊಬ್ಬರಿಗೆ ಬೆಂಬಲ ಬೆಲೆಯಾಗಿ ಪ್ರತಿ ಕ್ವಿಂಟಲ್‌ಗೆ 12 ಸಾವಿರ ರು. ನಿಗದಿ ಮಾಡಿದ್ದು, ರಾಜ್ಯ ಸರ್ಕಾರ 1500 ರು. ರೂ. ನಿಗದಿ ಮಾಡಿದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು ರೈತರ ಅನುಕೂಲಕ್ಕಾಗಿ ತೆರೆಯಲಾಗಿದೆ. ಖರೀದಿ ಕೇಂದ್ರದಲ್ಲಿ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಒಟ್ಟು 90 ದಿವಸಗಳ ಕಾಲ ಕೊಬ್ಬರಿ ಖರೀದಿ ಮಾಡಲಾಗುವುದು. ಅಗತ್ಯವಿದ್ದರೆ ಖರೀದಿಯ ಕಾಲಾವಕಾಶವನ್ನು ವಿಸ್ತರಿಸಲಾಗುವುದು. ಕಳೆದ ಬಾರಿ ನಿರೀಕ್ಷೆಯ ಮಟ್ಟದಲ್ಲಿ ಕೊಬ್ಬರಿ ಖರೀದಿ ಆಗಿಲ್ಲ. ಈ ಬಾರಿ ಹೆಚ್ಚು ಖರೀದಿ ಆಗುವ ನಿರೀಕ್ಷೆ ಇದೆ. ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ತಮ್ಮ ಪಹಣಿಗಳನ್ನು ಕೊಡಬಾರದು. ರೈತರೇ ಖುದ್ದಾಗಿ ನೋಂದಣಿ ಮಾಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಡಿಬಿಟಿಯನ್ನು ಅನುಷ್ಠಾನಗೊಳಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನ ವಹಿಸಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ನಮ್ಮ ದೇಶದಲ್ಲಿ ಕೇವಲ ಶೇ. 20 ಖಾದ್ಯ ತೈಲ ಉತ್ಪಾದನೆ ಆಗುತ್ತಿದೆ. ಇದರಿಂದ ಹೊರ ದೇಶಗಳಿಂದ ಖಾದ್ಯ ಎಣ್ಣೆಯನ್ನು ತರಿಸುತ್ತಿದ್ದೇವೆ. ನಮ್ಮ ರೈತರು ಸಹ ಆಧುನಿಕ ತಾಂತ್ರಿಕತೆ ಬಳಸಿಕೊಂಡು ಸರ್ಕಾರದ ಯೋಜನೆಗಳಲ್ಲಿ ಚಿಕ್ಕ ಚಿಕ್ಕ ಕೈಗಾರಿಕೆಗಳನ್ನು ಸ್ಥಾಪಿಸಿ, ಆ ಮೂಲಕ ಕೊಬ್ಬರಿ ಎಣ್ಣೆ, ತೆಂಗಿನ ಹಾಲು, ಇನ್ನೂ ಅನೇಕ ತೆಂಗಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬೇಕು. ತೆಂಗಿನ ಚಿಪ್ಪು, ಪುಡಿ ಸೇರಿದಂತೆ ಎಲ್ಲಾ ಉತ್ಪನ್ನಗಳೂ ಉಪಯೋಗಕರವಾಗಿದ್ದು, ವಿದೇಶಗಳಲ್ಲಿ ಇಂತಹ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿಯ ಬಗ್ಗೆ ಮಾತನಾಡಿದ ಅವರು, ಕೇಂದ್ರದ ನೀತಿ ಆಯೋಗ ತಿಳಿಸಿರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿ ಖಾತೆಯನ್ನು ತೆರೆಯಬೇಕು. ಆಗ ಮಾತ್ರ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಾಧ್ಯ ಎಂದು ಹೇಳಿದರು.

ನಂತರದಲ್ಲಿ ಮಾತನಾಡಿದ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌, ಕೃಷಿಗಾಗಿ ರೈತ ತನ್ನೆಲ್ಲಾ ಸಂಪನ್ಮೂಲವನ್ನು ಹಾಕಿ ಬದುಕನ್ನು ಕಟ್ಟಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಹೆಚ್ಚಾಗಿ ಬೆಳೆಯುವ ರೈತರು ಇದ್ದಾರೆ. ಈ ನಾಡಿನ ಕೊಬ್ಬರಿಗೆ ದೇಶದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಗುಜರಾತಿನಲ್ಲಿ ಹೆಚ್ಚು ಬೇಡಿಕೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧ್ಯಕ್ಷರು ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಮಾತನಾಡಿ, ದೇಶದಲ್ಲಿ ಅತೀ ಹೆಚ್ಚು ಕೊಬ್ಬರಿ ಬೆಳೆಯುವ ರಾಜ್ಯಗಳಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಚಪ್ಪಲಿ, ಬಟ್ಟೆ, ಹೀಗೆ ಎಲ್ಲಾ ಉತ್ಪನಗಳಿಗೂ ನಿಖರವಾದ ಬೆಲೆ ಇದೆ ಆದರೆ ರೈತ ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಇಲ್ಲ. ಸರ್ಕಾರಗಳು ರೈತರು ಬೆಳೆದ ಬೆಳೆಗೆ ನಿರ್ದಿಷ್ಟ ಬೆಲೆಯನ್ನು ನಿಗದಿ ಪಡಿಸಬೇಕು. ಸ್ಥಿರವಾದ ಬೆಲೆಯನ್ನು ಬಿಟ್ಟು ರೈತರಿಗೆ ನೀಡಿದರೆ ಆತ ಬೇರೆ ಏನು ಕೇಳುವುದಿಲ್ಲ ಎಂದು ತಿಳಿಸಿದರು.

ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಗೆ ೧೫ ಸಾವಿರ ರು. ಹಾಗೂ ರಾಜ್ಯ ಸರ್ಕಾರ ಕನಿಷ್ಟ 2ಸಾವಿರ ರು.ಗಳನ್ನು ನಿಗದಿಪಡಿಸಬೇಕು ಹಾಗೂ ನಫೆಡ್ ಕೇಂದ್ರವನ್ನು ವರ್ಷ ಪೂರ್ತಿ ತೆರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಮಾತನಾಡಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಹಾಪೌರರಾದ ಪ್ರಭಾವತಿ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಜಿ., ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಮಾರಾಟ ಮಂಡಳಿಯ ನಿರ್ದೇಶಕ ಗಂಗಾಧರ ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಸಿ. ಪಿಳ್ಳೇಗೌಡ, ನಫೆಡ್‌ ನಿರ್ದೇಶಕ ಗುರುನಾಥ ರೆಡ್ಡಿ ಪೋ ಪಾಟೀಲ ಮತ್ತಿತರರು ಹಾಜರಿದ್ದರು.

ತುಮಕೂರಿನಿಂದ ಸ್ಪರ್ಧಿಸುವುದಿಲ್ಲ: ಶೋಭಾ

ತುಮಕೂರು; ತಾವು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ವೇಳೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಊಹಾಪೋಹಗಳಿಗೆ ತೆರೆ ಎಳೆದರು. ತಮಗೆ ತುಮಕೂರಿನಿಂದ ಸ್ಪರ್ಧೆ ಮಾಡುವ ಯಾವ ಆಲೋಚನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.Quote 1ರಾಜ್ಯದಲ್ಲಿ 60,500 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಉತ್ಪತ್ತಿಯಾಗುತ್ತಿದೆ ಎಂದು ತಿಳಿಸಿದರಲ್ಲದೆ, ಕೇಂದ್ರ ಸರ್ಕಾರವು ಉಂಡೆ ಕೊಬ್ಬರಿಗೆ 15 ಸಾವಿರ ರು.ಗಳ ಬೆಂಬಲ ಬೆಲೆ ನೀಡಬೇಕು. ರಾಜ್ಯ ಸರ್ಕಾರದಿಂದ 2 ಸಾವಿರ ರು. ಬೆಂಬಲ ಬೆಲೆ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು.

ಡಾ.ಜಿ. ಪರಮೇಶ್ವರ್‌ ಗೃಹಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!