ಕೂಡ್ಲಿಗಿ: ಸರ್ಕಾರಗಳ ದುರಾಡಳಿತ ನೀತಿಯಿಂದ ಕಾರ್ಮಿಕರನ್ನು ಹಾಗೂ ರೈತರನ್ನು ಬೀದಿಗೆ ತರುವುದು ಸರಿಯಲ್ಲ. ಇದೇ ರೀತಿ ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತು ಕಾರ್ಮಿಕ ವಿರೋಧಿ ನೀತಿ ಹಿಂಪಡೆದುಕೊಳ್ಳದಿದ್ದರೆ ಕಾರ್ಮಿಕರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಸಿಐಟಿಯು ಸಂಘಟನೆಯ ಜಿಲ್ಲಾ ಮುಖಂಡ ಗುನ್ನಳ್ಳಿ ರಾಘವೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಅವರು ಪಟ್ಟಣದಲ್ಲಿ ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕರು, ಗ್ರಾಪಂ ನೌಕರರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆ ಸಹಯೋಗದಲ್ಲಿ ದೇಶವ್ಯಾಪಿ ಕಾರ್ಮಿಕರ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡುತ್ತಾ, ಇಡೀ ದೇಶದಲ್ಲಿ ಸಾರ್ವತ್ರಿಕ ಮುಷ್ಕರ ನಡೆಯುತ್ತಿದೆ. ಸುಮಾರು 30 ಕೋಟಿ ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಾರ್ಮಿಕರೆಂದರೆ ಅಸಡ್ಡೆ ಮಾಡದೇ ಅವರಿಗೆ ಸಿಗುವ ಸವಲತ್ತುಗಳನ್ನು ನೀಡಬೇಕು. ಅಧಿಕಾರಕ್ಕೆ ಬರುವ ಮೊದಲು ಕಾರ್ಮಿಕರು ದುಡಿಯುವ ಶಕ್ತಿ ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತೀರಿ. ಆದರೆ ಅಧಿಕಾರ ಸಿಕ್ಕ ತಕ್ಷಣ ಅವರನ್ನೇ ಮರೆತು ಬಂಡವಾಳಶಾಹಿಗಳ ಪರವಾಗಿರುವ ಕಾನೂನು ಕಾಯ್ದೆ ತಿದ್ದುಪಡಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಟ್ಟಣದ ಮಹಾತ್ಮ ಗಾಂಧೀಜಿ ಪವಿತ್ರ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಆರಂಭವಾದ ಮುಷ್ಕರ 300ಕ್ಕೂ ಹೆಚ್ಚು ಸಂಘಟಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿ ತಹಸೀಲ್ದಾರ್ ವಿ.ಕೆ. ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಸಂಘಟನೆಯ ಮಹಾಂತಮ್ಮ, ವೆಂಕಮ್ಮ, ಗ್ರಾಮಪಂಚಾಯಿತಿ ನೌಕರರ ಸಂಘಟನೆಯ ಯರ್ರಿಸ್ವಾಮಿ ಸೇರಿದಂತೆ ನೂರಾರು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.