ಅಲ್ಪಸಂಖ್ಯಾತರ ಓಲೈಕೆ ಮುಂದುವರಿದರೆ ಕಾಂಗ್ರೆಸ್‌ಕೂಡ ಇನ್ನೊಂದು ಮುಸ್ಲಿಂ ಲೀಗ್‌ ಆದೀತು: ಭಾರತಿ ಶೆಟ್ಟಿ

KannadaprabhaNewsNetwork | Published : Mar 23, 2025 1:32 AM

ಸಾರಾಂಶ

ರಾಜ್ಯ ಸರ್ಕಾರ ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಮರಿಗೆ ಮೀಸಲು ನೀಡುವುದನ್ನು ವಿರೋಧಿಸಿ ಶನಿವಾರ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಲ್ಪಸಂಖ್ಯಾತರ ಬಗೆಗಿನ ತುಷ್ಟೀಕರಣ ಇನ್ನೂ ಹೀಗೆಯೇ ಮುಂದುವರಿದರೆ ಮುಂದಿನ 10-15 ವರ್ಷದಲ್ಲಿ ಕಾಂಗ್ರೆಸ್‌ ಕೂಡ ಇನ್ನೊಂದು ಮುಸ್ಲಿಂ ಲೀಗ್‌ ಆದರೂ ಅಚ್ಚರಿ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ. ರಾಜ್ಯ ಸರ್ಕಾರ ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಮರಿಗೆ ಮೀಸಲು ನೀಡುವುದನ್ನು ವಿರೋಧಿಸಿ ಶನಿವಾರ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಇಲ್ಲಿನ ಮಿನಿ ವಿಧಾನಸೌಧ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಒಡೆದು ಆಳುವ ನೀತಿ ಅನುಸರಿಸುತ್ತಿದ್ದು, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಬೇಕಾದಷ್ಟು ನೆರವು ನೀಡುತ್ತಿದೆ. ಎಲ್ಲವನ್ನೂ ವಕ್ಫ್‌ ಆಸ್ತಿ ಎನ್ನುತ್ತಿದ್ದು, ಬಾಹ್ಯಾಕಾಶವನ್ನು ಕೂಡ ವಕ್ಫ್‌ ಆಸ್ತಿ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರ ಮೀಸಲು ವಿಚಾರ ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ ಎಂದರು. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ಅಧಿಕಾರದಲ್ಲಿರಲು ಯೋಗ್ಯತೆ ಇಲ್ಲ. ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ರಾಜ್ಯದ ಎಸ್‌.ಸಿ ಹಾಗೂ ಹಿಂದುಳಿದ ವರ್ಗಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಮುಸ್ಲಿಂ ಓಲೈಕೆ ನೀತಿಯ ಭಾಗವಾಗಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ನೀಚ ಮತ್ತು ಕೀಳುಮಟ್ಟದ ನಿರ್ಧಾರ ರಾಜ್ಯದ ಜನತೆಗೆ ಎಸಗಿದ ದ್ರೋಹವಾಗಿದೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣರಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದುಗಳ ಓಟ್‌ಗೆ ಬೆಲೆಯೇ ಇಲ್ಲ. ಸರ್ಕಾರದ ಈ ತಿರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ರೈತ ಬಜೆಟ್‌ ಜಾರಿಗೊಳಿಸಿತ್ತು. ಕಾಂಗ್ರೆಸ್‌ ಸರ್ಕಾರ ಒಂದು ವರ್ಗವನ್ನು ಸಂತೃಪ್ತಿಪಡಿಸಲು ಬಜೆಟ್‌ ಮಂಡಿಸಿದೆ. ಬಿಲ್ಲವರ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಘೋಷಿಸಿದ ನಾರಾಯಣಗುರು ನಿಗಮಕ್ಕೆ ಬಜೆಟ್‌ನಲ್ಲಿ ಕೇವಲ ಒಂದು ಲಕ್ಷ ರು. ಮೀಸಲಿಡುವ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯವನ್ನು ಸಿದ್ದರಾಮಯ್ಯ ಸರ್ಕಾರ ಅವಮಾನಿಸಿದೆ. ಒಂದು ಲಕ್ಷ ರುಪಾಯಿ ಭಿಕ್ಷೆಬೇಡಿ ರಾಜ್ಯ ಸರ್ಕಾರಕ್ಕೆ ನಾವು ವಾಪಸ್‌ ನೀಡುತ್ತೇವೆ. ಹಿಂದುಗಳ ತೆರಿಗೆ ಮುಸಲ್ಮಾನರು ಹಕ್ಕು ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್‌ ಸದಸ್ಯ ಕಿಶೋರ್‌ಕುಮಾರ್‌ ಪುತ್ತೂರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್‌ ಆರ್ವಾರ್‌, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್‌, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಮುಖಂಡರಾದ ರವಿಶಂಕರ ಮಿಜಾರ್‌, ನಿತಿನ್‌ಕುಮಾರ್‌, ಆರ್‌.ಸಿ. ನಾರಾಯಣ್‌, ಸುಲೋಚನಾ ಭಟ್‌, ಶಿಲ್ಪಾ ಸುವರ್ಣ, ಮಾಜಿ ಮೇಯರ್‌ಗಳಾದ ಸುಧೀರ್‌ ಶೆಟ್ಟಿ, ಜಯಾನಂದ ಅಂಚನ್‌, ಮನೋಜ್‌ ಕುಮಾರ್‌ ಮತ್ತಿತರರಿದ್ದರು.

ನಂತರ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಎಲ್ಲರನ್ನೂ ಬಂಧಿಸಿ ಬಿಡುಗಡೆಗೊಳಿಸಿದರು. ರಸ್ತೆ ತಡೆ ವೇಳೆ ಭಾರತಿ ಶೆಟ್ಟಿ ಮತ್ತು ಸುಲೋಚನಾ ಭಟ್‌ ತಳ್ಳಲ್ಪಟ್ಟು ರಸ್ತೆಗೆ ಬಿದ್ದರು. ಆಗ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಮಹಿಳಾ ಪೊಲೀಸರು ಮುಂದಾಗುತ್ತಿದ್ದಂತೆ ವಾಗ್ವಾದ ನಡೆಯಿತು. ಅಷ್ಟಕ್ಕೇ ಪೊಲೀಸರು ಅವರನ್ನು ಬಿಟ್ಟುಬಿಟ್ಟರು.

Share this article