ಕೇಂದ್ರ ಪರವಾನಗಿ ಕೊಟ್ಟರೆ ನಾಳೆಯೇ ಮಹದಾಯಿ ಆರಂಭ

KannadaprabhaNewsNetwork |  
Published : Apr 26, 2024 12:51 AM ISTUpdated : Apr 26, 2024 8:30 AM IST
ಸಿದ್ದರಾಮಯ್ಯ ಭಾಷಣ. | Kannada Prabha

ಸಾರಾಂಶ

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ನಾವು ಟೆಂಡರ್ ಕರೆದಿದ್ದೇವೆ. ಕೇಂದ್ರ ಸರ್ಕಾರ ಪರವಾನಗಿ ಕೊಟ್ಟರೆ ನಾಳೆಯೇ ಮಹದಾಯಿ ಕುಡಿವ ನೀರಿನ ಯೋಜನೆ ಆರಂಭಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

 ಗಜೇಂದ್ರಗಡ/ಹಾವೇರಿ :  ಮಹದಾಯಿ ಕುಡಿಯುವ ನೀರಿನ ಯೋಜನೆಗೆ ನಾವು ಟೆಂಡರ್ ಕರೆದಿದ್ದೇವೆ. ಕೇಂದ್ರ ಸರ್ಕಾರ ಪರವಾನಗಿ ಕೊಟ್ಟರೆ ನಾಳೆಯೇ ಮಹದಾಯಿ ಕುಡಿವ ನೀರಿನ ಯೋಜನೆ ಆರಂಭಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎಂದು ಈ ಹಿಂದೆ ಬಿಜೆಪಿಯವರು ರಕ್ತದಲ್ಲಿ ಬರೆದುಕೊಟ್ಟಿದ್ದರು. ಆದರೆ ಪರಿಸರ ಮಂಜೂರಾತಿ ಕೊಡಿಸಲು ಬೊಮ್ಮಾಯಿ ಹಾಗೂ ಬಿಜೆಪಿಯವರಿಗೆ ಆಗಲಿಲ್ಲ. ಮೋದಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ. ಬೊಮ್ಮಾಯಿ ಅವರು 2 ವರ್ಷಗಳ ಕಾಲ ಸಿಎಂ ಆಗಿದ್ದಾಗ ಈ ಭಾಗಕ್ಕೆ ನೀಡಿದ ಕೊಡುಗೆ ಶೂನ್ಯವಾಗಿದೆ ಎಂದರು.

ಜೋಶಿ ವಿರುದ್ಧ ತೀವ್ರ ವಾಗ್ದಾಳಿ

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವಿ ತಾಲೂಕು ತಡಸ ಕ್ರಾಸ್‌ನಲ್ಲಿ ಪಕ್ಷದ ಅಭ್ಯರ್ಥಿ ವಿನೋದ್‌ ಅಸೂಟಿ ಪರ ಪ್ರಚಾರ ನಡೆಸಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ಹರಿಹಾಯ್ದರು. ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ‌ ಸಚಿವ ಪ್ರಹ್ಲಾದ ಜೋಶಿ ಯಾವತ್ತೂ ಪ್ರಶ್ನಿಸಲಿಲ್ಲ. 25 ಸಂಸದರಲ್ಲಿ ಒಬ್ಬರೂ ಕನ್ನಡಿಗರ ಹಿತ ಕಾಪಾಡುವ ಕೆಲಸ‌ ಮಾಡಿಲ್ಲ. ಒಮ್ಮೆಯೂ ಕನ್ನಡಿಗರ ಪರವಾಗಿ ಮಾತನಾಡದ ಇವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಬರಗಾಲ ಇದೆ. ಬರ ಪರಿಹಾರ ಕೊಡಿ ಎಂದು ಪ್ರಧಾನಿ ಮೋದಿ, ಅಮಿತ್‌ ಶಾ ಬಳಿ ಕೇಳಿದರೆ ಕೊಡಲಿಲ್ಲ. 150 ದಿನ ಕೂಲಿ ಕೊಡಲಿಲ್ಲ. ಇದು ಅವರು ಮಾಡಿದ ದೊಡ್ಡ ಮೋಸ. ರಾಜ್ಯದ ಜನರ ತೆರಿಗೆ ಹಣಕ್ಕೆ ಆದ ದ್ರೋಹವನ್ನು ಸಮರ್ಥಿಸಿದ ಜೋಶಿ ಅವರನ್ನು ಈ ಬಾರಿ ಸೋಲಿಸಲೇಬೇಕು. ಶ್ರೀಮಂತ ಉದ್ಯಮಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರಿಂದ ಹುಬ್ಬಳ್ಳಿ-ಧಾರವಾಡ ಜನಕ್ಕೆ ಏನು ಸಿಕ್ಕಿತು ಎಂದು ಪ್ರಶ್ನಿಸಿದರು.ನೇಹಾ ಹತ್ಯೆ ವಿಚಾರದಲ್ಲಿ ಬಿಜೆಪಿ ರಾಜಕಾರಣ: ಸಿಎಂನೇಹಾ ಹತ್ಯೆ ಪ್ರಕರಣದಲ್ಲಿ ನಾವು ಯಾವುದೇ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರೇ ರಾಜಕಾರಣ ಮಾಡುತ್ತಿದ್ದಾರೆ. ಅನ್ಯಾಯವಾಗಿರುವ ಕುಟುಂಬಕ್ಕೆ ನಾವು ನ್ಯಾಯ ಒದಗಿಸಿಕೊಡುವ ಕಾರ್ಯ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

PREV