ಕನ್ನಡಪ್ರಭ ವಾರ್ತೆ ಗಂಗಾವತಿ
ಲೋಕಸಭಾ ಚುನಾವಣೆ ಅಂಗವಾಗಿ ಮನೆ- ಮನೆಗೆ ಭೇಟಿ ನೀಡಿದ ಚುನಾವಣೆ ಅಧಿಕಾರಿಗಳನ್ನು 85 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಅಂಗವಿಕಲರು ಖುಷಿಯಿಂದ ಬರಮಾಡಿಕೊಂಡು ತಮ್ಮ ಮತ ಚಲಾಯಿಸಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕರೆ ನೀಡಿದರು.ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಗೆ ಮನೆಯಲ್ಲೆ ಮತದಾನ ಮಾಡಲು ಚುನಾವಣೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದವರು ಮನೆಯಲ್ಲೇ ಮತದಾನ ಮಾಡಿ ಖುಷಿಪಟ್ಟರು. ಹಿರಿಯ ನಾಗರಿಕರ ಕುಟುಂಬಸ್ಥರು ಕೂಡ ಭಾರತ ಚುನಾವಣೆ ಆಯೋಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ನಿಯೋಜಿತ ಚುನಾವಣೆ ಅಧಿಕಾರಿಗಳ ತಂಡ ಮನೆ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸಿದರು.
ಪ್ರತಿ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತ ಹಾಕಬೇಕಿತ್ತು. ಈ ಬಾರಿ ಭಾರತ ಚುನಾವಣೆ ಆಯೋಗವು ಅಂಗವಿಕಲರು ಹಾಗೂ 85 ವರ್ಷ ಮೇಲ್ಪಟ್ಟವರು ಮತದಾನ ಮಾಡಲು ವಿಶೇಷ ಕಾಳಜಿ ವಹಿಸಿ, ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಿದೆ.ಯುವ ಮತದಾರರು ಮೇ 7ರಂದು ನೇರವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು ಎಂದು ಹಿರಿಯ ನಾಗರಿಕರು ಕರೆ ನೀಡಿದರು.
ಶತಾಯುಷಿ ಮತದಾನ:ಮಲ್ಲಾಪುರ ಗ್ರಾಮದಲ್ಲಿ ಶತಾಯುಷಿ ದ್ಯಾಮವ್ವ ಭೀಮಪ್ಪ(103), ದಂಪತಿ ಈರಪ್ಪ ಸಿನ್ನೂರ(96), ಲಕ್ಷ್ಮಮ್ಮ ಈರಪ್ಪ (89), ದ್ಯಾವಮ್ಮ ಪುರದ (94), ಯಂಕಮ್ಮ ಗೋವಿಂದಪ್ಪ ಜನಾದ್ರಿ ಯಂಕಮ್ಮ (91), ಸಂಗಾಪುರ ಗ್ರಾಮದಲ್ಲಿ ಲಕ್ಷ್ಮೀಬಾಯಿ (87), ಕಮಲಮ್ಮ (87), ರಾಮಾಂಜನೆಮ್ಮ (86), ಗೋಪಾಲ್ ರಾವ್ (91) ಮತಚಲಾಯಿಸಿದರು.ಇದೇ ವೇಳೆ ಮಲ್ಲಾಪುರ ಗ್ರಾಮದಲ್ಲಿ ತಾಲೂಕು ಸ್ವೀಪ್ ತಂಡದಿಂದ ಮತದಾನ ಜಾಗೃತಿ ಕಾರ್ಯಕ್ರಮವು ನಡೆಯಿತು. ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸುವಂತೆ ಮಾಹಿತಿ ನೀಡಲಾಯಿತು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಪತ್ತಾರ್, ಚುನಾವಣಾ ಸಿಬ್ಬಂದಿ ಸೆಕ್ಟರ್ ಆಫೀಸರ್‌ಗಳಾದ ಪ್ರಕಾಶ ನಾಯ್ಕ್, ರಾಜಶೇಖರ, ಚುನಾವಣೆ ಸಿಬ್ಬಂದಿ ಪಿಆರ್‌ಓ, ಎಪಿಆರ್, ಎಎಸ್‌ಐ, ಮೈಕ್ರೋ ಆಫೀಸರ್, ಬಿಎಲ್ ಓಗಳು, ತಾಲೂಕು ಐಇಸಿ ಸಂಯೋಜಕರು, ಸಂಗಾಪುರ ಹಾಗೂ ಮಲ್ಲಾಪುರ ಗ್ರಾಪಂ ಕಾರ್ಯದರ್ಶಿಗಳು, ಡಿಇಒ ಹಾಗೂ ಸಿಬ್ಬಂದಿ ಇದ್ದರು.