ಹುಬ್ಬಳ್ಳಿ:
ಬಾಲಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ. ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸಿದರೆ ಗಡಿಪಾರು ಮಾಡಬೇಕಾಗುತ್ತದೆ. ಹುಷಾರಾಗಿರಿ...!ಇದು ಇಲ್ಲಿನ ಹಳೆ ಸಿಎಆರ್ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ರೌಡಿಗಳ ಪರೇಡ್ ನಡೆಸಿ ನೀಡಿರುವ ಎಚ್ಚರಿಕೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಡ್ರಗ್ ಪೆಡ್ಲರ್‌ಗಳ ಪರೇಡ್ ನಡೆಸಿದ್ದ ಕಮಿಷನರೇಟ್, ಸೋಮವಾರ ರೌಡಿ ಪರೇಡ್ ನಡೆಸಿತು.ಹು-ಧಾ ಮಹಾನಗರದ 1288 ರೌಡಿಗಳ ಪೈಕಿ 820 ರೌಡಿಗಳು ಹಾಜರಿದ್ದರು. ವಿದ್ಯಾರ್ಥಿಗಳು, 25 ವರ್ಷದ ಯುವಕರು, 60 ವರ್ಷ ಮೇಲ್ಪಟ್ಟ ರೌಡಿಗಳು ಹಾಗೂ 20ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿ ರೌಡಿಗಳು ಬಂದಿದ್ದರು. ಅವರನ್ನು ತರಾಟೆಗೆ ತೆಗೆದುಕೊಂಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ದೇವರ ಹೆಸರಲ್ಲಿ ಸಭ್ಯರಂತೆ ವರ್ತಿಸುವುದು ಸರಿಯಲ್ಲ. ಕೊಲೆ ಮಾಡಿ ಮಾಲೆ ಧರಿಸಿದರೆ ದೇವರು ಕ್ಷಮಿಸುತ್ತಾನೆಯೇ? ನಡವಳಿಕೆ ಸರಿಯಿರಬೇಕು. ಮನುಷ್ಯರಂತೆ ವರ್ತಿಸಬೇಕು ಎಂದು ಎಚ್ಚರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತ ಎನ್. ಶಶಿಕುಮಾರ, 820 ರೌಡಿಗಳು ಹಾಜರಾಗಿದ್ದು, ಪ್ರತಿಯೊಬ್ಬರ ರೌಡಿಗಳಿಂದ ಮೊಬೈಲ್ ಫೋನ್ ವಶಕ್ಕೆ ಪಡೆದು ಅವುಗಳನ್ನು ಸಿಡಿಆರ್‌ಗೆ ಹಾಕಿ ಮಾಹಿತಿ ಸಂಗ್ರಹಿಸಲಾಗುವುದು. ವಾಟ್ಸ್ ಆ್ಯಪ್, ಸಾಮಾಜಿಕ ಜಾಲತಾಣಗಳಲ್ಲಿರುವ ಅವರ ಖಾತೆ ಸೇರಿದಂತೆ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಈ ಹಿಂದೆ ಪ್ರಕರಣದಲ್ಲಿ ರೌಡಿ ಪಟ್ಟಿಯಲ್ಲಿ ಹೆಸರು ಸೇರಿಕೊಂಡವರು, ನಡುವಳಿಕೆ ಸರಿಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿಸಿ ಬರಲು ಸಿದ್ಧರಾದರೆ ಪಟ್ಟಿಯಿಂದ ಹೆಸರನ್ನು ತೆಗೆಯಲಾಗುವುದು. ಈ ಬಗ್ಗೆ ಮಾಹಿತಿ ಸಂಗ್ರಹಿಸಿಸಲು ಸಿಬ್ಬಂದಿಗೆ ತಿಳಿಸಲಾಗುವುದು. ಇನ್ನೂ ಕೆಲವರು ಅಪರಾಧಗಳಲ್ಲಿ ಭಾಗವಹಿಸುತ್ತಿದ್ದು, ಅಗತ್ಯ ಬಿದ್ದರೆ ಅವರನ್ನು ಗಡಿಪಾರು ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ನಮ್ಮ ಸಿಬ್ಬಂದಿಗೆ ರೌಡಿಪಟ್ಟಿಗೆ ಸಂಬಂಧಿಸಿದ 130 ಬಗೆಯ ಮಾಹಿತಿ ಸಂಗ್ರಹಿಸಿ, ಮಂಗಳವಾರದೊಳಗೆ ಪಟ್ಟಿ ನವೀಕರಿಸಬೇಕು ಎಂದು ಸೂಚಿಸಲಾಗಿದೆ. ರೌಡಿಗಳ ಕಾರ್ಯಚಟುವಟಿಕೆಗಳು ಏನು?, ಎಲ್ಲಿ ಸಭೆ ನಡೆಸುತ್ತಾರೆ, ಎಲ್ಲಿ ಅಡ್ಡಗಳನ್ನು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಪಡೆಯಬೇಕು ಎಂದು ತಿಳಿಸಿದ್ದೇನೆ ಎಂದರು.ಪ್ರಮುಖ ರೌಡಿಗಳು ಪರೇಡ್‌ಗೆ ಬಂದಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲವರು ಕೋರ್ಟ್ ವಿಚಾರಣೆ, ಗಡಿಪಾರು ಶಿಕ್ಷೆಗೊಳಗಾಗಿದ್ದರೆ, ಇನ್ನು ಕೆಲವರು ಉದ್ದೇಶಪೂರ್ವಕವಾಗಿ ಪರೇಡ್‌ಗೆ ಬರದೆ ತಲೆಮರೆಸಿಕೊಂಡಿದ್ದಾರೆ. ಅವರ ಮಾಹಿತಿ ಸಂಗ್ರಹಿಸಿ, ಮಂಗಳವಾರ ಸಂಜೆಯೊಳಗೆ ಠಾಣೆಗೆ ಕರೆಸಿ ಎಚ್ಚರಿಕೆ ನೀಡಬೇಕು ಎಂದು ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ವಿನೋದ ಮುಕ್ತೇದಾರ, ಶಿವರಾಜ ಕಟಕಭಾವಿ ಹಾಗೂ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಪಾಲ್ಗೊಂಡಿದ್ದರು.