ಕನ್ನಡಪ್ರಭ ವಾರ್ತೆ ಬೆಳಗಾವಿಲಿಂಗಾಯತ ಮಠ, ಮಾನ್ಯಗಳು ಹಾಗೂ ಸಮಾಜದ ಹಿರಿಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದೆ ಹೋಗಿದ್ದರೇ ಇಂದು ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿತ್ತು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ನುಡಿದರು.
ಕೊಲುವೆನೆಂಬ ಭಾಷೆ ದೇವನದಾದರೇ ಗೆಲುವೆನೆಂಬ ಭಾಷೆ ಭಕ್ತನದು ಎಂಬಂತೆ ಸಮಾಜ ಬಾಂಧವರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ಬಸವ ಜಯಂತಿ ಉತ್ಸವದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿ, 12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಮಾಡಿದ ಕ್ರಾಂತಿ ಯಶಸ್ವಿಯಾಗಲಿಲ್ಲ. ಅಂದು ಅದು ಯಶಸ್ವಿಯಾಗಿದ್ದರೇ ಇಂದು ಜಾತಿ, ಉಪಜಾತಿಗಳ ನಡುವೆ ಸಮಾಜ ಹರಿದು ಹಂಚಿ ಹೋಗುತ್ತಿರಲಿಲ್ಲ. ಜಾತಿ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರ ಅನುಯಾಯಿಗಳಲ್ಲಿಯೇ ಇವತ್ತು ನೂರಾರು ಜಾತಿ ಉಪಜಾತಿಗಳಾಗಿದ್ದು ಬೇಸರದ ಸಂಗತಿ. ಬಸವಣ್ಣನ ಕ್ರಾಂತಿ ಅಂದು ಯಶಸ್ವಿಯಾಗಿದ್ದರೇ ಇಂದು ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತಿತ್ತು ಎಂದು ವಿವರಿಸಿದರು.ಅರಳಿಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, ಕುಂದಾನಗರಿ ಬೆಳಗಾವಿ ಬಸವನಗರಿ ಆಗುತ್ತಿರುವುದು ಸಂತಸದ ವಿಷಯ. ಸಮಾಜ ಬಾಂಧವರು ತಮ್ಮ ಮನೆಯಲ್ಲಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿ ಮಹೋದಯರಿಗೆ ಕಾಣಿಕೆ ನೀಡುವ ಬದಲು ವಚನಾದಾರಿತ ಪುಸ್ತಕ ನೀಡಿದರೆ ಶರಣ ಸಂಸ್ಕೃತಿಯ ಜತೆ ಜತೆಗೆ ಕನ್ನಡ ಭಾಷೆಯ ಬೆಳವಣಿಗೆಯೂ ಆಗುತ್ತದೆ ಎಂದು ತಿಳಿಸಿದರು.
ಸಮಾರಂಭಕ್ಕೂ ಮುಂಚೆ ರಾಜ್ಯ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಆಕರ್ಷಕವಾಗಿ ಮೂಡಿಬಂದಿತು. ಪ್ರಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಖಜಾಂಚಿ ಮುರಿಗೆಪ್ಪ ಬಾಳಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ವಂದಿಸಿದರು. ಮಂಜುನಾಥ ಶರಣಪ್ಪನವರ ನಿರೂಪಿಸಿದರು.
-------ಶತಮಾನಗಳ ಹಿಂದೆ ಜನರ ಬಳಿ ಸಂಸ್ಕಾರವಿದ್ದು, ಶಿಕ್ಷಣವಿರಲಿಲ್ಲ. ಪ್ರಸ್ತುತ ಯುವ ಜನತೆ ಬಳಿ ಶಿಕ್ಷಣವಿದ್ದು, ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ. ಇದು ಅತ್ಯಂತ ಆತಂಕದ ವಿಷಯ. ಸಮಾಜದಲ್ಲಿ ತಂದೆ, ತಾಯಿ, ಗುರು, ಹಿರಿಯರ ಬಗೆಗಿನ ಗೌರವ ಕಡಿಮೆಯಾಗುತ್ತಿದ್ದು ಯುವ ಜನತೆ ದಾರಿತಪ್ಪಿ ವ್ಯಸನಿಗಳಾಗುತ್ತಿರುವುದು ನೋವಿನ ಸಂಗತಿ. ಕಾರಣ ಸಂಸ್ಕಾರಯುತ ಸಮಾಜ ನಿರ್ಮಾಣದ ಅನಿವಾರ್ಯತೆ ಇದೆ.
-ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ.