ರಾಣಿಬೆನ್ನೂರು: ನಗರದಲ್ಲಿನ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛ ಮಾಡಿಸಬೇಕು. ಇಲ್ಲದಿದ್ದರೆ ಅಂತಹ ಖಾಲಿ ನಿವೇಶನಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಹೇಳಿದರು.
ಸಾರ್ವಜನಿಕರು ಹಾಗೂ ಕಲ್ಯಾಣ ಮಂಟಪದ ಸಿಬ್ಬಂದಿ ಹಸಿ ಕಸ ಮತ್ತು ಒಣಕಸವನ್ನು ವಿಂಗಡಿಸಿ ಆಟೋ ಟಿಪ್ಪರ್‌ಗಳಿಗೆ ನೀಡಬೇಕು. ರಸ್ತೆ ಬದಿಯ ಎಲ್ಲ ಡಬ್ಬಾ ಅಂಗಡಿಯ ಮಾಲೀಕರು ತಮ್ಮ ಅಂಗಡಿಯ ಸುತ್ತ-ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಎಲ್ಲ ಹೋಟೆಲ್‌ಗಳ ಮಾಲೀಕರು ತಮ್ಮ ಹೋಟೆಲ್‌ಗಳಲ್ಲಿ ಸ್ವಚ್ಛತೆಯ ಜೊತೆಗೆ ಕುಡಿಯುವ ನೀರಿನ ಸಿಂಟ್ಯಾಕ್ಸ್ ಮತ್ತು ಅಂಡರ್‌ಗೌಂಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಶುಚಿಯಾಗಿಟ್ಟುಕೊಳ್ಳಬೇಕು. ಜನರು ನಗರಸಭೆಗೆ ಸಹಕಾರ ನೀಡಿದರೆ ರಾಣಿಬೆನ್ನೂರು ಸೌಂದರ್ಯಕ್ಕೆ ಇನ್ನಷ್ಟು ಮೆರಗು ಬರುತ್ತದೆ. ದೂರುಗಳನ್ನು ನಗರಸಭೆ ಪೌರಾಯುಕ್ತರು 8277070079, ಮಧುರಾಜ ಕಂಬಳಿ 9900766186, ರಾಘವೇಂದ್ರ ಗಾವಡೆ 8147514310, ಭೋವಿ 8147793862, ಶೃತಿ ಮಾರಣ್ಣನವರ 7204382435 ಸಂಪರ್ಕಿಸಬಹುದು ಎಂದರು.
ಉಪಾಧ್ಯಕ್ಷ ನಾಗರಾಜ ಪವಾರ ಮಾತನಾಡಿ, ನಗರದ ಎಲ್ಲ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಗಿಯನ್ನು ಪಡೆಯಬೇಕು ಹಾಗೂ ಪಡೆದ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳಬೇಕು. ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಕಸವನ್ನು ರಸ್ತೆಗೆ ಎಸೆಯಬಾರದು. ತಮ್ಮ ಕಂಪೌಂಡ್ ಹೊರತು ಪಡಿಸಿ ತಮ್ಮ ಮನೆಯ ಮುಂಭಾಗದಲ್ಲಿ ಹೂವಿನ ಗಿಡಗಳನ್ನು ಬೆಳೆಸಿ ಮತ್ತೆ ಅದಕ್ಕೆ ತಂತಿ ಬೇಲಿಯನ್ನು ಹಾಕಬಾರದು ಎಂದರು.ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಇಡಿ ರಾಜ್ಯದಲ್ಲಿ ಹೃದಯ ಭಾಗದಲ್ಲಿರುವ ವಾಣಿಜ್ಯ ನಗರಿ ರಾಣಿಬೆನ್ನೂರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡಲು ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರ ವರ್ಗ ಬದ್ಧವಾಗಿದೆ. ಜನರು ಸಹಕಾರ ನೀಡುವುದರ ಮೂಲಕ ರಾಜ್ಯದಲ್ಲಿ ಮಾದರಿ ತಾಲೂಕಾನ್ನಾಗಿ ಮಾಡಲು ಶ್ರಮಿಸಬೇಕು. ಹೊಸದಾಗಿ ಕಟ್ಟಡ ಕಟ್ಟುವ ಮಾಲೀಕರು ತಮ್ಮ ಮನೆಯ ಮುಂದೆ ಇರುವ ಗಟಾರ ಬ್ಲಾಕ್ ಆಗದಂತೆ ಹಾಗೂ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ನೀರು ಸಂಪರ್ಕಕ್ಕೆ ಆಗಲಿ,ಒಳಚರಂಡಿ ಸಂಪರ್ಕ ಪಡೆಯಲು ಆಗಲಿ ನಗರಸಭೆಯ ಪರವಾನಗಿ ಇಲ್ಲದೇ ರಸ್ತೆ ಅಗೆಯುವಂತಿಲ್ಲ. ಪರವಾನಗಿ ಇಲ್ಲದೇ ರಸ್ತೆ ಅಗೆದಿದ್ದೆ ಆದರೆ ದಂಡ ಸಮೇತ ಕ್ರಮ ವಹಿಸಲಾಗುವುದು ಎಂದರು.