ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಯೋಗದಲ್ಲಿ, ಮಂಗಳವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಕಾನೂನು ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹದಿಹರೆಯದ ವಯಸ್ಸಿನಲ್ಲಿ ವ್ಯಸನಗಳಿಗೆ ಸಿಲುಕಿ ಯುವಕರು ಕಾನೂನು ಸಂಘರ್ಷಕ್ಕೆ ಒಳಗಾಗುವ ಸಂಗತಿಗಳು ಹೆಚ್ಚಾಗುತ್ತಿವೆ. ಯುವಕರು ಕಾನೂನುಬಾಹಿರ ಸಂಗತಿಗಳ ಕಡೆ ಗಮನ ಹರಿಸದೇ, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒಲವು ತೊರಬೇಕು ಎಂದರು.ದೇಶದ ಜನಸಂಖ್ಯೆಯ ಶೇ.29 ರಷ್ಟು ಯುವಜನರಿದ್ದಾರೆ. 15 ರಿಂದ 29 ವರ್ಷದ ಒಳಗಿರುವವರನ್ನು ಯುವಕರು ಎಂದು ಕರೆಯಲಾಗಿತ್ತದೆ. ದೇಶದ ಪ್ರಗತಿ ಹಾಗೂ ಅಭಿವೃದ್ಧಿಗೆ ಯುವಜನರೇ ಮೂಲವಾಗಿದ್ದಾರೆ. ಸ್ವಾಮಿ ವಿವೇಕಾನಂದರು ಶಿಕ್ಷಣ ಯುವಕರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು.
ಜಿಲ್ಲಾ ಯುವಜನ ಅಧಿಕಾರಿ ಸುಹಾಸ್ ಎನ್. ಮಾತನಾಡಿ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಓದುವಾಗಲೇ ವೃತ್ತಿ ಬಗ್ಗೆ ಯೋಚಿಸಿ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಐ ಹಾಗೂ ಆಟೋಮೇಷನ್ ಲರ್ನಿಂಗ್ ಪ್ರವರ್ಧಮಾನಕ್ಕೆ ಬರಲಿದ್ದು, ಇದರಲ್ಲಿ ಹೆಚ್ಚಿನ ಕೌಶಲ್ಯ ಗಳಿಸಲು ಪ್ರಯತ್ನಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣದ ಆರೋಪದಲ್ಲಿ ಸಿಲುಕಿ ಬಂಧನಕ್ಕೆ ಒಳಗಾದವರ ಪೈಕಿ ಹೆಚ್ಚಿನವರು ಯುವಕರೇ ಆಗಿರುವುದು ರ್ದುದೈವದ ವಿಷಯ ಎಂದು ನ್ಯಾಯಾಧೀಶ ಎಂ.ವಿಜಯ ಹೇಳಿದರು.
ಚಿತ್ರದುರ್ಗ ಜಿಲ್ಲೆ ಬಾಲ್ಯವಿವಾಹಗಳ ಪ್ರಕರಣಗಳು ಹೆಚ್ಚಿವೆ. ಇದು ಅತ್ಯಂತ ಅಪಮಾನಕರ ಸಂಗತಿಯಾಗಿದೆ. ಈ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಶಿಕ್ಷಣ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಜಯ್ ತಿಳಿಸಿದರು.