ಕುಮಟಾದಲ್ಲಿ ಗೋಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Jan 23, 2025 12:49 AM

ಸಾರಾಂಶ

ಇನ್ನಾದರೂ ಎಚ್ಚೆತ್ತು ಅಪರಾಧಿಗಳನ್ನು ಹಿಡಿದು ಸೂಕ್ತ ಶಿಕ್ಷೆ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕುಮಟಾ: ಹೊನ್ನಾವರದ ಸಾಲ್ಕೋಡದ ಕೊಂಡಾಕುಳಿಯಲ್ಲಿ ಗರ್ಭಿಣಿ ಹಸುವನ್ನು ಕತ್ತರಿಸಿ ಎಸೆದ ಪ್ರಕರಣ ಖಂಡಿಸಿ ಗೋಬ್ಯಾಂಕ್ ಹಾಗೂ ಹಿಂದು ಸಂಘಟನೆಗಳಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಸನಾತನ ಹಿಂದು ಧರ್ಮದ ಮಾನಬಿಂದುಗಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ ಮುಖ್ಯವಾಗಿ ಮಾತೃ ಸಮಾನ ಗೋವುಗಳ ಮೇಲೆ ಆಕ್ರಮಣ, ಹಿಂಸೆ ಅವ್ಯಾಹತವಾಗಿ ನಡೆಯುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ಹಸಿಯಾಗಿರುವಾಗಲೇ ಹೊನ್ನಾವರದ ಕೊಂಡಾಕುಳಿಯಲ್ಲಿ ಗರ್ಭಿಣಿ ಹಸುವಿನ ತಲೆ ಕಡಿದು ಎಸೆದು ಹೋದ ಪೈಶಾಚಿಕ ಘಟನೆ ಮಾನವ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.

ಜನರಲ್ಲಿ ಭೀತಿ ಹುಟ್ಟಿಸಿದೆ. ಇಂತಹ ಘೋರ ಕೃತ್ಯ ನಡೆದರೂ ಆಡಳಿತ ನಿದ್ದೆ ಮಾಡುತ್ತಿದೆ. ಸರ್ಕಾರದ ಈ ಅಸಡ್ಡೆ ಅನುಮಾನಾಸ್ಪದವಾಗಿದೆ. ನ್ಯಾಯದ ನಿರೀಕ್ಷೆ ಕನಸಾಗಿದ್ದು, ಹಿಂದು ಸಮಾಜದ ಸಹನೆ ಕಟ್ಟೆಯೊಡೆಯುತ್ತಿದೆ. ಇನ್ನಾದರೂ ಎಚ್ಚೆತ್ತು ಅಪರಾಧಿಗಳನ್ನು ಹಿಡಿದು ಸೂಕ್ತ ಶಿಕ್ಷೆ ಕೊಡಿಸಬೇಕು. ಇಲ್ಲದಿದ್ದರೆ ಯೋಗ್ಯ ಪ್ರತ್ಯುತ್ತರ ಕೊಡುವ ಶಕ್ತಿ ಸಾಮರ್ಥ್ಯ ಹಿಂದು ಸಮಾಜಕ್ಕಿದೆ ಎಂದು ಸಿದ್ಧಪಡಿಸಬೇಕಾಗುತ್ತದ ಎಂದು ಮನವಿ ಮೂಲಕ ತಿಳಿಸಲಾಯಿತು. ಭಾರತೀಯ ಗೋಬ್ಯಾಂಕ್ ಅಧ್ಯಕ್ಷ ಮುರಲೀಧರ ಪ್ರಭು, ಹಿಂದು ಸಂಘಟನೆಗಳಿಂದ ಗಿರೀಶ ಭಟ್, ವಕೀಲ ನಾಗರಾಜ ನಾಯಕ ಕಾರವಾರ ಮಾತನಾಡಿ, ತಕ್ಷಣ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಆರಂಭದಲ್ಲಿ ಗಿಬ್ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಗೋಹತ್ಯೆ ವಿರುದ್ಧ ಫಲಕ ಹಿಡಿದು ಘೋಷಣೆ ಕೂಗುತ್ತಾ ತಾಲೂಕು ಆಡಳಿತ ಸೌಧದೆದುರು ತಲುಪಿದರು. ಈ ವೇಳೆ ಸಾರ್ವಜನಿಕವಾಗಿ ಮನವಿಯನ್ನು ಭಾರತೀಯ ಗೋಬ್ಯಾಂಕ್ ವ್ಯವಸ್ಥಾಪಕ ವಿವೇಕ ಭಟ್ ಬ್ರಹ್ಮೂರು ಓದಿದರು. ಮನವಿಯನ್ನು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಸ್ವೀಕರಿಸಿದರು. ತಹಸೀಲ್ದಾರ್ ಸತೀಶ ಗೌಡ ಇದ್ದರು. ಈ ವೇಳೆ ಜಿ.ಐ. ಹೆಗಡೆ, ಎಂ.ಜಿ. ಭಟ್, ಡಾ. ಜಿ.ಜಿ. ಹೆಗಡೆ, ಪ್ರಶಾಂತ ನಾಯ್ಕ, ಗಣೇಶ ಭಟ್ ಬಗ್ಗೋಣ, ಜಗನ್ನಾಥ ನಾಯ್ಕ, ಎಂ.ಎಂ. ಹೆಗಡೆ, ಎಸ್.ವಿ. ಹೆಗಡೆ, ಸತೀಶ ನಾಯ್ಕ, ಸಂದೀಪ ಭಂಡಾರಿ, ಅನುರಾಧಾ ಬಾಳಗಿ, ಜಯಾ ಶೇಟ, ಶಿವಾನಂದ ಹೆಗಡೆ ಕಡತೋಕಾ, ಅನುರಾಧಾ ಭಟ್, ವಿನಾಯಕ ಭಟ್ ಸಂತೆಗುಳಿ, ಗೋದಾವರಿ ಹೆಗಡೆ, ಜಿ.ಎಸ್. ಹೆಗಡೆ, ಸುಧಾಕರ ತಾರಿ, ಶ್ರೀಕಾಂತ ಭಟ್, ಸಂತೋಷ ನಾಯ್ಕ, ಪವನ ಶೆಟ್ಟಿ, ರವಿರಾಜ ಕಡ್ಲೆ, ಜಿ.ಎಸ್. ಗುನಗಾ ಇತರರು ಇದ್ದರು.

Share this article