ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರ ಹೇಳಿಕೆ
ಈ ಹಿಂದಿನ ಸರ್ಕಾರ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದನ್ನು ಸಹ ಮರೆತಿತ್ತು. ಸಾಹಿತಿಗಳನ್ನು ಗೌರವಿಸುವುದಕ್ಕೆ ಪುನಃ ನಮ್ಮ ಸರ್ಕಾರವೇ ಬರಬೇಕಾಯಿತು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಕಳಕಳಿಯಿಂದ ಬಾಕಿ ಇದ್ದ ಎಲ್ಲ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ 2021, 22ನೇ ವರ್ಷ ಗೌರವ ಪ್ರಶಸ್ತಿ ಮತ್ತು ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.ನಾಲ್ಕು ವರ್ಷಗಳ ಹಿಂದೆಯೇ ಕೊಡಬೇಕಾಗಿದ್ದ ಪ್ರಶಸ್ತಿಗಳನ್ನು ಈ ಹಿಂದೆ ಇದ್ದ ಸರ್ಕಾರ(ಬಿಜೆಪಿ) ಕೊಡಲೇ ಇಲ್ಲ. ಸಾಹಿತಿಗಳನ್ನು ಗೌರವಿಸುವುದಕ್ಕೂ ಆಗಲಿಲ್ಲ. ಅಷ್ಟೇ ಅಲ್ಲ, ಈ ಹಿಂದೆ ನಮ್ಮ ಸರ್ಕಾರ ಇದ್ದ ವೇಳೆಯಲ್ಲಿ ಅಕಾಡೆಮಿಗಳಿಗೆ ನೀಡುತ್ತಿದ್ದ ಅನುದಾನವನ್ನು ₹1. 20 ಕೋಟಿಯಿಂದ ₹60 ಲಕ್ಷಕ್ಕೆ ಇಳಿಸಿದರು. ಈಗ ನಮ್ಮ ಸರ್ಕಾರ ಬಂದ ಮೇಲೆ ₹ 80 ಲಕ್ಷ ನಿಗದಿ ಮಾಡಿದ್ದು, ಹಂತ ಹಂತವಾಗಿ ಹೆಚ್ಚಳ ಮಾಡುವುದಾಗಿ ಹೇಳಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕನ್ನಡ ಸಂಕಷ್ಟದಲ್ಲಿದೆ. ಅದನ್ನು ಬೆಳೆಸುವ ಕಾರ್ಯವನ್ನು ಸರ್ಕಾರ ಮತ್ತು ಅಕಾಡೆಮಿಗಳು ಮಾಡಬೇಕಾಗಿದೆ. ಕೊಪ್ಪಳದಲ್ಲಿ ಸಮಾರಂಭ ಆಯೋಜನೆ ಮಾಡಿರುವ ಸಂತೋಷದ ವಿಷಯ. ಆದರೆ, ಅಕಾಡೆಮಿಗಳು ಕೇವಲ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವುದು ಅಷ್ಟೇ ಅಲ್ಲ, ಸಂದಿಗ್ದ ಸ್ಥಿತಿಯಲ್ಲಿರುವ ಕನ್ನಡವನ್ನು ಕಾಪಾಡುವುದಕ್ಕಾಗಿ ಚಿಂತಿಸಬೇಕಾಗಿದೆ. ಖಾಸಗಿ ಶಾಲೆಗಳು ಹೆಚ್ಚುತ್ತಿರುವುದರಿಂದ ಕನ್ನಡ ಕಲಿಸುವ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ, ಇವುಗಳನ್ನು ಉಳಿಸುವ ಅಗತ್ಯವಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಲ್ಕೈದು ವರ್ಷಗಳಿಂದ ಬಾಕಿ ಇದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಕೊನೆಗೂ ನೀಡಿ, ಸಾಹಿತಿಗಳನ್ನು ಗೌರವಿಸಲಾಯಿತು.
2022ನೇ ವರ್ಷದ ಗೌರವ ಪ್ರಶಸ್ತಿಯನ್ನು ಪ್ರೊ. ಆರ್.ಕೆ. ಹುಡುಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಸ್ವೀಕಾರ ಮಾಡಿದರೆ ತುಂಬಾಡಿ ರಾಮಯ್ಯ ಗೈರಾಗಿದ್ದರು. 2022ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ದಾಸನೂರು ಕೂಸಣ್ಣ, ಡಾ. ಅನುಸೂಯಾ ಕಾಂಬಳೆ, ಬಿ. ಮಹೇಶ ಹರವೇ, ಎಚ್. ಎನ್. ಆರತಿ, ಚಲಂ ಹಾಡ್ಲಹಳ್ಳಿ, ರೂಮಿ ಹರೀಶ್ ಹಾಗೂ ಡಾ. ಸಾರಿಕಾದೇವಿ ಎಲ್. ಕಾಳಗಿ ಸ್ವೀಕರಿಸಿದರು. ಇದರ ಜೊತೆಗೆ 2021ನೇ ವರ್ಷದ ಪುಸ್ತಕ ಬಹುಮಾನವನ್ನು 17 ಸಾಹಿತಿಗಳಿಗೆ ಕೊಡಮಾಡಲಾಯಿತು.ಹಿಂದಿ ಹೇರಿಕೆ ಸಹಿಸಲ್ಲ:
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, 22 ರಾಜ್ಯ ಭಾಷೆಗಳಿದ್ದು, ಅವರೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ನೀಡಿರುವ ಭಾಷಾ ಆಯ್ಕೆ ಪಾಲಕರು ಮತ್ತು ವಿದ್ಯಾರ್ಥಿಗಳದ್ದು ಎನ್ನುವುದರ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದರು.