ಹಾನಗಲ್ಲ: ಪರಿಸರ ನಾಶ, ಕಾಂಕ್ರೀಟ್ ಕಾಡಿನ ವಿಸ್ತಾರದಿಂದಾಗಿ ಆಮ್ಲಮಳೆಯಂತಹ ವಿಪರೀತಗಳು ಸಂಭವಿಸುತ್ತಿವೆ. ನಮ್ಮಲ್ಲಿ ಜಾಗೃತಿ ಮೂಡದಿದ್ದರೆ ಜೀವಕುಲಕ್ಕೆ ದೊಡ್ಡ ಆಪತ್ತು ಕಾದಿದೆ ಎಂದು ಪರಿಸರ ತಜ್ಞ ಮಂಜುನಾಥ ಮಠದ ಹೇಳಿದರು.
ಕದಳಿ ಮಹಿಳಾ ವೇದಿಕೆ ಸದಸ್ಯೆ ಸುಜಾತಾ ನಂದೀಶೆಟ್ಟರ ಶರಣೆ ಅಮುಗೆ ರಾಯಮ್ಮ ಕುರಿತು ಮಾತನಾಡಿ, ನೇಕಾರ ವೃತ್ತಿಯ ಅಮುಗೆ ರಾಯಮ್ಮ ಭಕ್ತಿ ವೈರಾಗ್ಯದ ನಿಧಿಯಾಗಿದ್ದರು. ಅಹಂಕಾರ ಸುಟ್ಟು ಆತ್ಮಬಲದ ಮೂಲಕ ಎಲ್ಲವನ್ನೂ ಗೆಲ್ಲಬೇಕು. ಸ್ವಯಂ ಅರಿವಿನಿಂದ ಮಾತ್ರ ನಮ್ಮ ಚಿತ್ತ ಸ್ವಚ್ಛವಾಗಿರಲು ಸಾಧ್ಯ. ಶರಣರ ಸಂದೇಶಗಳು ಈಗ ಮನೆ ಮನೆಯ ಮಾತಾಗಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಧಾರ್ಮಿಕ, ಸಾಂಸ್ಕೃತಿಕ ಅರಿವಿನೊಂದಿಗೆ ಪರಿಸರದ ಅರಿವು ಮೂಡಿಸಲು ಮುಂದಾಗೋಣ. ಎಲ್ಲರೂ ಒಂದಾಗಿ ಆಲೋಚಿಸಿದರೆ ಮಾತ್ರ ಈ ಪ್ರಕೃತಿ ಸ್ವಚ್ಛವಾಗಿ ಉಳಿಯಲು ಸಾಧ್ಯ. ಒಂದು ಮಗು ಒಂದು ಗಿಡ ಎಂದು ಆಲೋಚಿಸಿದರೆ ಖಂಡಿತ ನಮ್ಮ ಪರಿಸರ ಉಳಿಸಲು ಸಾಧ್ಯ ಎಂದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ತಾಲೂಕು ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ, ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಉಪಾಧ್ಯಕ್ಷ ಶಂಭುಲಿಂಗ ಹೇಮಗಿರಿಮಠ, ವಕೀಲ ಎಂ.ಎಸ್. ಹುಲ್ಲೂರ, ತಾಲೂಕು ಕಾರ್ಯದರ್ಶಿ ಸುಭಾಸ ಹೊಸಮನಿ, ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ರೇಖಾ ಶೆಟ್ಟರ, ಅಕ್ಕಮ್ಮ ಶೆಟ್ಟರ, ಜ್ಯೋತಿ ಜಾಧವ, ಸುಮಂಗಲಾ ಕಟ್ಟಿಮಠ, ಶೋಭಾ ಪಾಟೀಲ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.