ಪರಿಸರ ಉಳಿದರೆ ಮನುಕುಲ ಉಳಿದೀತು: ಬಸವಶಾಂತಲಿಂಗ ಸ್ವಾಮೀಜಿ

KannadaprabhaNewsNetwork |  
Published : Jun 6, 2024 12:30 AM ISTUpdated : Jun 6, 2024 12:31 AM IST
೫ಎಚ್‌ವಿಆರ್೨- | Kannada Prabha

ಸಾರಾಂಶ

ಸ್ವರ್ಗದಲ್ಲಿ ನಿಸರ್ಗವಿಲ್ಲ, ನಿಸರ್ಗದಲ್ಲಿ ಸ್ವರ್ಗವಿದೆ. ಮಕ್ಕಳು ನಮ್ಮ ಭವಿಷ್ಯ, ಅವರಿಗೆ ಗಿಡ-ಮರಗಳನ್ನು ಪರಿಚಯಿಸಬೇಕು. ಅವರಲ್ಲಿ ಪರಿಸರ ಪ್ರೀತಿ ಬೆಳೆಸಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಸುಖ ಭೋಗಗಳನ್ನು ತ್ಯಜಿಸಿ ಬುದ್ಧ ನಡೆದದ್ದು ಕಾಡಿನತ್ತ, ಮರದ ಕೆಳಗೆ ಕುಳಿತು ಜ್ಞಾನೋದಯ ಪಡೆದವ ನಾಡಿಗೆ ಒಂದು ಬೆಳಕನ್ನು ಹಂಚಿದ. ಪರಿಸರ ನಮಗೆ ಬರಿ ಗಿಡಮರಗಳ ತಾಣವಲ್ಲ, ವೃಕ್ಷವೆಂದರೆ ದೇವತೆ ಎಂಬ ಆದರ್ಶ ನಮ್ಮದು. ಪರಿಸರ ಉಳಿದರೆ ಮನುಕುಲ ಉಳಿದೀತು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಸ್ಥಳೀಯ ಹೊಸಮಠದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ವರ್ಗದಲ್ಲಿ ನಿಸರ್ಗವಿಲ್ಲ, ನಿಸರ್ಗದಲ್ಲಿ ಸ್ವರ್ಗವಿದೆ. ಮಕ್ಕಳು ನಮ್ಮ ಭವಿಷ್ಯ, ಅವರಿಗೆ ಗಿಡ-ಮರಗಳನ್ನು ಪರಿಚಯಿಸಬೇಕು. ಅವರಲ್ಲಿ ಪರಿಸರ ಪ್ರೀತಿ ಬೆಳೆಸಬೇಕು ಎಂದು ತಿಳಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜನಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಗಿಡಮರಗಳು ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಗಿಡಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಬೇಕು. ಮಕ್ಕಳು ಮನೆಯ ಖಾಲಿಜಾಗದಲ್ಲಿ ಹೂ ಗಿಡಗಳನ್ನು ಬೆಳೆಸಬೇಕು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಎಸ್.ಎ. ವಜ್ರಕುಮಾರ್ ಮಾತನಾಡಿ, ವೃಕ್ಷೋ ದೇವೋಭವ ಎಂಬುದು ನಮ್ಮ ಉಸಿರಾಗಬೇಕು. ಪರಿಸರ ನಮಗೆ ಬರಿ ಮರ, ಗಿಡಗಳ ತಾಣವಲ್ಲ. ವೃಕ್ಷವೆಂದರೆ ದೇವತೆ ಎನ್ನುವ ಆದರ್ಶ ನಮ್ಮದು ಎಂದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಪರಿಸರಕ್ಕೆ ಮಾನವನೇ ಮಾರಕ ವೈರಸ್. ಕೊಳ್ಳುಬಾಕತನ ಕಡಿಮೆಯಾಗಲಿ, ಮಿತ ಬಳಕೆ, ಮರುಬಳಕೆ, ಸರಳ ಜೀವನ ನಮ್ಮದಾದರೆ ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಪ್ರಕೃತಿ ನಮ್ಮ ಆಸೆ ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ ಎಂದರು.ವಿದ್ಯಾರ್ಥಿಗಳಾದ ಮುರಳಿ ದಂಡೆಮ್ಮನವರ ಹಾಗೂ ಸಿಂಚನ ಮಾಕನೂರ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಬೀಬಿ ಫಾತಿಮಾ ಉಪಸ್ಥಿತರಿದ್ದರು. ಯೋಜನಾಧಿಕಾರಿ ನಾರಾಯಣ ಸ್ವಾಗತಿಸಿದರು. ಹರಿಪ್ರಿಯಾ ವಂದಿಸಿದರು.

PREV