ಬ್ಯಾಡಗಿ:ಹಸಿರುಕ್ರಾಂತಿ ಪರಿಣಾಮ ದೇಶದ ರೈತರು ಬೀಜ ಸ್ವಾತಂತ್ರ್ಯ ಕಳೆದುಕೊಂಡರು. ಪ್ರಸ್ತುತ ಸರ್ಕಾರಗಳ ಕೃಷಿ ನೀತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೇ ರೈತರು ಕೃಷಿ ಸ್ವಾತಂತ್ರ್ಯ ಕಳೆದುಕೊಂಡರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಆಹಾರ ಕ್ಷಾಮ ನೀಗಿಸುವ ನೆಪದಲ್ಲಿ ಸರ್ಕಾರ ಕೊಟ್ಟ ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಕೃಷಿಭೂಮಿಗಳು ಬರಡಾಗುತ್ತಿವೆ. ಸರ್ಕಾರದ ನಿರ್ಧಾರಗಳನ್ನು ಅನಿವಾರ್ಯವಾಗಿ ಒಪ್ಪಿಕೊಂಡರೂ ಬರುವ ದಿನಗಳಲ್ಲಿ ರೈತರು ಕೃಷಿಯಲ್ಲಿ ಸ್ವಾವಲಂಬಿಗಳಾಗದಿದ್ದರೇ ಅನಾಹುತ ತಪ್ಪಿದ್ದಲ್ಲ ಎಂದರು.
ನರಸತ್ತ ಬೀಜ ನೀತಿ ಬದಲಾಗಲಿ:ದೇಶದ ಬೀಜ ನೀತಿ ಕಂಪನಿಗಳ ಪರವಾಗಿದೆ. ಬೆಳೆ ಬರದಿದ್ದರೂ ಪರವಾಗಿಲ್ಲ, ಮಾರಾಟ ಮಾಡಿದ ಬೀಜದಲ್ಲಿ ಶೇ. 60ರಷ್ಟು ಮೊಳಕೆಯೊಡೆದರೇ ಕಂಪನಿ ಬಚಾವ್. ಅಷ್ಟಕ್ಕೂ ಆತನ ವಿರುದ್ಧ ಕ್ರಮಕ್ಕೆ ಮುಂದಾದರೆ ಪ್ರತಿ ಎಕರೆಗೆ ಕೇವಲ ₹500 ದಂಡ ವಿಧಿಸಲಾಗುತ್ತದೆ. ಇದರಿಂದ ಹಲ್ಲುಕಿತ್ತ ಹಾವಿನಂತಾಗಿರುವ ರೈತರು ಕೇವಲ ಬುಸುಗುಟ್ಟಿ ಸುಸ್ತಾಗುತ್ತಿದ್ದಾರಲ್ಲದೇ, ಕೃಷಿ ಮೇಲಿನ ವೆಚ್ಚ ನಿಭಾಯಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ರೈತರು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಪಾರಂಪರಿಕ ಕೃಷಿ ಮುಂದುವರಿಸಬೇಕು. ನಮ್ಮದೇ ಬೀಜಗಳ ಮರು ಬಳಕೆ ಸೇರಿದಂತೆ ಸಾವಯವ ಕೃಷಿಗೆ ಮುಂದಾಗಬೇಕು ಎಂದರು.ತೋಟಗಾರಿಕೆಗೆ ಒತ್ತು ನೀಡಿ:ತೋಟಗಾರಿಕೆಯತ್ತ ಯುವಕರ ಚಿತ್ತ ಕುರಿತು ಮಾತನಾಡಿದ ನ್ಯಾಯವಾದಿ ಎಂ.ಕೆ. ವೀರನಗೌಡ್ರ, ನಮ್ಮ ಪೂರ್ವಜರು ಕೃಷಿ ಆದಾಯಲ್ಲಿಯೇ ಕುಟುಂಬ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ. ಕಾರಣವಿಷ್ಟೇ ಅವಿಭಕ್ತ ಕುಟುಂಬದ ಅಷ್ಟೂ ಸದಸ್ಯರು ಭೂಮಿ ಕೆಲಸಕ್ಕಿಳಿಯುತ್ತಿದ್ದರು. ಆದರೆ, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದ್ದು ಕೂಲಿ ಕಾರ್ಮಿಕರಿಲ್ಲದೇ ಕೃಷಿ ನಿರ್ವಹಣೆ ಅಸಾಧ್ಯವಾಗಿದೆ. ಕೃಷಿ ಮೇಲಿನ ವೆಚ್ಚ ಹೆಚ್ಚಾಗಿದೆ. ಎಕರೆಗೆ 30 ಕ್ವಿಂಟಲ್ ಗೋವಿನಜೋಳ ಬೆಳೆದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ದೀರ್ಘ ಕಾಲದ ಹಾಗೂ ಶಾಶ್ವತ ಆದಾಯದ, ಕಡಿಮೆ ನೀರು ಬಳಕೆ ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು.