ಶುಂಠಿ ಕಣ ಬಂದ್ ಮಾಡಿದರೆ ಶಾಸಕರು ಖರೀದಿಸ್ತಾರಾ?

KannadaprabhaNewsNetwork |  
Published : Nov 24, 2026, 12:45 AM IST
ಫೋಟೋ 22 ಎ, ಎನ್, ಪಿ 2 ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿ. ಪಂ. ಮಾಜಿ ಸದಸ್ಯ ರತ್ನಾಕರ ಹೊನಗೋಡ್ ಮಾತನಾಡಿದರು. | Kannada Prabha

ಸಾರಾಂಶ

If the ginger procurement center is shut down, will the MLAs make the purchases?

-ರೈತ ವಿರೋಧಿ ನಡೆ

-ಶುಂಠಿ ಕಣಗಳ ಆರಂಭ ಮಾಡಿದ ರೈತರಿಗೆ ನೋಟಿಸ್‌: ರತ್ನಾಕರ ಹೊನಗೋಡ್ ಆಕ್ರೋಶ

ಕನ್ನಡಪ್ರಭ ವಾರ್ತೆ ಆನಂದಪುರ

ಶುಂಠಿ ಕಣಗಳನ್ನು ಬಂದ್ ಮಾಡಿದರೆ ರೈತರು ಬೆಳೆದ ಶುಂಠಿಯನ್ನು ಶಾಸಕರು ಹಾಗೂ ಅಧಿಕಾರಿಗಳು ಖರೀದಿ ಮಾಡುತ್ತಾರಾ ಎಂದು ಜಿ. ಪಂ. ಮಾಜಿ ಸದಸ್ಯ ರತ್ನಾಕರ ಹೊನಗೋಡ್ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶುಂಠಿ ಕಣಗಳನ್ನು ಆರಂಭ ಮಾಡಿದ ರೈತರು ಮತ್ತು ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗುತ್ತಿದೆ. ತಹಸೀಲ್ದಾರ್ ಅವರ ಅನುಮತಿ ಇಲ್ಲದೆ ಯಾವುದೇ ರೀತಿಯಲ್ಲಿ ಶುಂಠಿ ಕಣ ನಡೆಸಲು ಅವಕಾಶವಿಲ್ಲ ಎಂದು ಅಧಿಕಾರಿಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ ಆರೋಪಿಸಿದರು.

ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಶುಂಠಿ ಕಣದವರನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ. ರೈತರ ಪರವಾಗಿ ಧ್ವನಿ ಎತ್ತದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದ ಶಾಸಕರು, ರೈತರು ನಡೆಸುತ್ತಿರುವ ಶುಂಠಿ ಕಣಗಳ ಮೇಲೆ ಕಣ್ಣು ಹಾಕಿದ್ದಾರೆ. ರೈತರು ಬೆಳೆದಂತಹ ಶುಂಠಿಯನ್ನು ಶಾಸಕರು ಅಥವಾ ಅಧಿಕಾರಿಗಳು ಖರೀದಿ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಶಾಸಕರಾದವರು ರೈತರ ಬದುಕಿನ ಬಗ್ಗೆ ಸ್ವಲ್ಪವಾದರೂ ಕಾಳಜಿ ತೋರಿಸುವುದನ್ನು ಬಿಟ್ಟು ಯಾರಿಗೆ ಹೇಗೆ ತೊಂದರೆ ನೀಡಬೇಕು ಎಂಬುದರ ಬಗ್ಗೆಯೇ ಚಿಂತಿಸಬಾರದು ಎಂದರು.

ಶುಂಠಿ ಕಣಗಳಿಂದ ರೈತರಿಗೆ ಮಾತ್ರವಲ್ಲದೆ ಅನೇಕ ಕೂಲಿ ಕಾರ್ಮಿಕರಿಗೂ ಉದ್ಯೋಗ ದೊರೆಯುತ್ತದೆ. ಇದರಿಂದ ಹಲವು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಇಂತಹ ವಾಸ್ತವವನ್ನು ಅರಿಯದೆ ಅಧಿಕಾರಿಗಳ ಮೂಲಕ ನೋಟಿಸ್ ಕೊಡಿಸುವುದು ಎಷ್ಟರ ಮಟ್ಟಿಗೆ ಸರಿ?, ಶುಂಠಿ ವ್ಯಾಪಾರಸ್ಥರು ಹಾಗೂ ರೈತರಿಗೆ ಈ ರೀತಿ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರೈತರ ಮೇಲೆ ಇದೇ ರೀತಿ ದಬ್ಬಾಳಿಕೆ ಮುಂದುವರಿದರೆ ಸುಮ್ಮನಿರಲು ಸಾಧ್ಯವಿಲ್ಲ. ಹಿಂದೆ ರೈತರು ತಮ್ಮ ಹಕ್ಕುಗಳಿಗಾಗಿ ಪೊರಕೆ ಚಳವಳಿ ನಡೆಸುತ್ತಿದ್ದರು. ಈಗ ಶಾಸಕರ ವಿರುದ್ಧವಾಗಿ ಬಡಿಗೆ ಚಳವಳಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಕಾಗೋಡು ತಿಮ್ಮಪ್ಪನವರಿಗೆ ಪ್ರಶಸ್ತಿ ವಿಳಂಬ:: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿ 22 ದಿನಗಳಾಗಿದ್ದರೂ ಜಿಲ್ಲಾಡಳಿತದ ಮೂಲಕ ಇನ್ನೂ ಪ್ರಶಸ್ತಿ ತಲುಪಿಸಿಲ್ಲ. ಈ ವಿಚಾರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನಿರ್ಲಕ್ಷ್ಯ ವಹಿಸುವ ಮೂಲಕ ಹಿರಿಯ ರಾಜಕೀಯ ನಾಯಕರಿಗೆ ಅಗೌರವ ತೋರುತ್ತಿದ್ದಾರೆ. ಇನ್ನೊಂದು ವಾರದೊಳಗೆ ಕಾಗೋಡು ತಿಮ್ಮಪ್ಪನವರಿಗೆ ಪ್ರಶಸ್ತಿ ತಲುಪಿಸದಿದ್ದರೆ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ರತ್ನಾಕರ ಹೊನಗೋಡ್ ತಿಳಿಸಿದರು.

ಗೋಷ್ಠಿಯಲ್ಲಿ ಮ್ಯಾಮ್ ಕೋಸ್‌ ನಿರ್ದೇಶಕರಾದ ಭರ್ಮಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಪಕ್ಷದ ಪ್ರಮುಖರಾದ ರೇವಪ್ಪ ಹೊಸಕೊಪ್ಪ , ಶಿವಾನಂದ ಗೇರ್ಬೀಸ್, ದೇವರಾಜ್, ರವಿ ಗೌತಮಪುರ, ಶ್ರೀನಿವಾಸ್, ಶಿವಕುಮಾರ್ ಗೌತಮಪುರ, ಭೂದ್ಯಪ್ಪ ಇನ್ನಿತರರು ಉಪಸ್ಥಿತರಿದ್ದರು.

------

ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿ. ಪಂ. ಮಾಜಿ ಸದಸ್ಯ ರತ್ನಾಕರ ಹೊನಗೋಡ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿತೆಗಳು ಜೀವಪರ ಸಂದೇಶ ಸಾರುವಂತಿರಲಿ
ನಿಮ್ಮ ಕುಂದು-ಕೊರತೆಗಳನ್ನು ಅಧಿಕಾರಿಗಳ ಮುಂದೆ ಮುಕ್ತವಾಗಿ ಹೇಳಿ: ಶಾಸಕ ಮಂಜು