ಈಗಾಗಲೇ ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಸಿಂಧುಘಟ್ಟ, ಸಂತೇಬಾಚಹಳ್ಳಿ, ಆನೆಗೊಳ, ಮಂದಗೆರೆ ಗ್ರಾಪಂಗಳಲ್ಲಿ ಪ್ರಜಾ ಸೇವೆ ಯಶಸ್ವಿಯಾಗಿ ನಡೆದಿದೆ. ಜನರು ಸಲ್ಲಿಸಿದ ಅರ್ಜಿಯನ್ನು ಬೇಗ ವಿಲೇವಾರಿ ಮಾಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಬಳ್ಳೆಕೆರೆ ಗ್ರಾಪಂ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನ, ಜನಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಜನರು ಕಚೇರಿಗಳಿಗೆ ಅಲೆದಾಡದೆ, ಒಂದೇ ಸ್ಥಳದಲ್ಲಿ ಎಲ್ಲಾ ಸೇವೆಗಳನ್ನು ಪಡೆಯಬೇಕು. ನಿಮ್ಮ ಕುಂದು-ಕೊರತೆಗಳನ್ನು ಅಧಿಕಾರಿಗಳ ಮುಂದೆ ಮುಕ್ತವಾಗಿ ಹೇಳಿ, ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯ ಉದ್ದೇಶ ಹೊಂದಿದೆ ಎಂದರು.

ಈಗಾಗಲೇ ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಸಿಂಧುಘಟ್ಟ, ಸಂತೇಬಾಚಹಳ್ಳಿ, ಆನೆಗೊಳ, ಮಂದಗೆರೆ ಗ್ರಾಪಂಗಳಲ್ಲಿ ಪ್ರಜಾ ಸೇವೆ ಯಶಸ್ವಿಯಾಗಿ ನಡೆದಿದೆ. ಜನರು ಸಲ್ಲಿಸಿದ ಅರ್ಜಿಯನ್ನು ಬೇಗ ವಿಲೇವಾರಿ ಮಾಡಲಾಗುತ್ತಿದೆ. ಹಾಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ‌ ಮಾಡಿದರು.

ಇ ಸ್ವತ್ತು ಅಭಿಯಾನದ ಬಗ್ಗೆ ಇಒ ಜಾಗೃತಿ:

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನದ ಬಗ್ಗೆ ತಾಪಂ ಇಓ ಕೆ.ಸುಷ್ಮಾ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿದರು.

ಇ-ಸ್ವತ್ತು ಪಡೆಯಲು ಒದಗಿಸಬೇಕಾದ ದಾಖಲೆಗಳ ಬಗ್ಗೆ ವಿವರಿಸಿದರು.

ಆರ್ ಟಿಸಿ ಜಾಗಕ್ಕೆ ಅಗತ್ಯ ದಾಖಲೆ ಸಲ್ಲಿಸಬೇಕು. ಗ್ರಾಮಠಾಣ ಕಟ್ಟಡಗಳಿಗೆ ಬೇಕಾದ ದಾಖಲೆಗಳು: ಗ್ರಾಮಠಾಣದಲ್ಲಿನ ಕಟ್ಟಡಗಳಿಗೆ ಕಟ್ಟಡ ಸೇರಿದಂತೆ ಉಳಿಕೆ ಜಾಗಕ್ಕೆ 4000 ಚ.ಅಡಿಗಳ ಮಿತಿಗೊಳಪಟ್ಟು ಇ-ಸ್ವತ್ತು ವಿತರಣೆ ಮಾಡಲಾಗುವುದು. ಅಂತಿಮ ಅನುಮೋದನೆ ನಂತರ ಇ-ಸ್ವತ್ತು ಪಡೆಯುವಾಗ ಆನ್ ಲೈನ್ ಮೂಲಕ ನೀಡಲಾಗುವುದು. ಚಾಲ್ತಿ ತೆರಿಗೆಯನ್ನು ಸಂಪೂರ್ಣ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಪಿಂಚಣಿ ಯೋಜನೆ, ವಹತಿ ತಿದ್ದುಪಡಿ, ಪೋಡಿ ಆಂದೋಲನ, ದೇವಸ್ಥಾನದ ಅಭಿವೃದ್ಧಿ, ಜೀರ್ಣೋದ್ಧಾರ, ಇ-ಸ್ವತ್ತು ಯೋಜನೆ, ಪಡಿತರ ಚೇಟಿ ತಿದ್ದುಪಡಿ, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ನರೇಗಾ ಯೋಜನೆ, ರಸ್ತೆ ಅಭಿವೃದ್ಧಿ, ಕೆರೆ ತುಂಬಿಸುವ ಯೋಜನೆ, ಸರ್ಕಾರಿ ಶಾಲೆಗಳ ಅಭಿವೃದ್ದಿ, ಅಂಗನವಾಡಿ ಅಭಿವೃದ್ಧಿ, ಕುಡಿಯುವ ನೀರು ಯೋಜನೆ, ಪೊಲೀಸ್ ಇಲಾಖೆ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಹಲವು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರಗಳನ್ನು ಶಾಸಕ ಎಚ್.ಟಿ.ಮಂಜು ವಿತರಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಎಸ್.ಶ್ರೇಯಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ, ಗ್ರಾಪಂ ಆಡಳಿತಾಧಿಕಾರಿ ದಿವಾಕರ್.ಎಸ್, ಪಿಡಿಓ ಪ್ರವೀಣ್ ಕುಮಾರ್, ಬೂಕನಕೆರೆ ಹೋಬಳಿ ರಾಜಸ್ವ ನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಗ್ರಾಪಂ ಕಾರ್ಯದರ್ಶಿ ರಾಮಚಂದ್ರು, ಲೆಕ್ಕ ಸಹಾಯಕ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿಗಳಾದ ಸುನಿಲ್, ಶಶಿಕುಮಾರ್, ಮುಖಂಡರಾದ ಬೋರ್ ವೆಲ್ ಮಹೇಶ್, ನಾರ್ಗೋನಹಳ್ಳಿ ಸುಧಾಕರ್, ಬಳ್ಳೇಕೆರೆ ನಾಗೇಶ್, ಕುಮಾರ್, ಉದಯಕುಮಾರ್, ಸಿ.ಪಿ.ರಘು ಸೇರಿದಂತೆ ಹಲವು ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂಮಾಜಿ ಸದಸ್ಯರು ಉಪಸ್ಥಿರಿದ್ದರು.