ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದನೆ ನೀಡದಿದ್ದಲ್ಲಿ ರಾಜ್ಯವು ಅಗತ್ಯ ಉತ್ಪನ್ನವಾದ ರಬ್ಬರ್ ಬೆಳೆ ಕಳೆದುಕೊಳ್ಳಲಿದೆ ಎಂದು ಅರ್ಥಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ ಎಚ್ಚರಿಸಿದ್ದಾರೆ.
ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಶನಿವಾರ, ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಹಾಗೂ ರಾಜ್ಯದ ರಬ್ಬರ್ ವ್ಯವಹಾರ ಮಾಡುವ ಸಹಕಾರ ಸಂಘಗಳ ಆಶ್ರಯದಲ್ಲಿ ನಡೆದ ರಬ್ಬರ್ ಬೆಳೆಗಾರರ ರಾಜ್ಯ ಸಮ್ಮೇಳನ-೨೦೨೫ರಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ ಸರಕಾರ ಸ್ಪಂದನೆ ನೀಡದಿದ್ದಲ್ಲಿ ರಾಜ್ಯವು ಅಗತ್ಯ ಉತ್ಪನ್ನವಾದ ರಬ್ಬರ್ ಬೆಳೆಯನ್ನು ಕಳೆದುಕೊಳ್ಳಲಿದೆ. ಭಾರತದಲ್ಲಿ ರಬ್ಬರ್ ಬಳಕೆ ಅಧಿಕವಿದೆ. ಆದರೆ ಸುಂಕ ರಹಿತವಾಗಿ ಆಮದಾಗುತ್ತಿರುವ ರಬ್ಬರ್ ಆಂತರಿಕ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ರಫ್ತು ಪ್ರಮಾಣವು ವರ್ಷದಿಂದ ವರ್ಷಕ್ಕೆ ತೀವ್ರ ಕಡಿಮೆಯಾಗುತ್ತಿದೆ ಎಂದು ವರ್ಮುಡಿ ಆತಂಕ ವ್ಯಕ್ತಪಡಿಸಿದರು.
ಉಜಿರೆ ರಬ್ಬರ್ ಸೊಸೈಟಿ ದೇಶದಲ್ಲೇ ಸಹಕಾರಿ ಸಂಸ್ಥೆಯಾಗಿ ಅತೀ ಹೆಚ್ಚು ಪ್ರಮಾಣದ ರಬ್ಬರ್ ವ್ಯವಹಾರ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಈ ಸೊಸೈಟಿಯು ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸವನ್ನು ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ರಬ್ಬರ್ ಪ್ರಮುಖ ಬೆಳೆಯಾಗಿದ್ದು, ಡಾ. ವಿಘ್ನೇಶ್ವರ ವರ್ಮುಡಿ ಅವರು ತಯಾರಿಸಿದ ಈ ವರದಿಯ ಗಂಭೀರ ಅಧ್ಯಯನ ನಡೆಸಿ ಕೇಂದ್ರದ ಕೃಷಿ ಹಾಗೂ ವಾಣಿಜ್ಯ ಸಚಿವರ ಜತೆ ಸಮನ್ವಯತೆಯ ಜೊತೆಗೆ ರಬ್ಬರ್ ಬೆಳೆಗಾರರ ಸಮಸ್ಯೆಯ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
೧೧ ವರ್ಷಗಳಿಂದ ಮೋದಿ ಸರ್ಕಾರ ಹಲವು ಯೋಜನೆಗಳೊಂದಿಗೆ ಕೃಷಿಗೆ ವಿಶೇಷ ಒತ್ತನ್ನು ನೀಡುವ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಕೃಷಿಕನ ಆದಾಯ ದ್ವಿಗುಣ ಉದ್ದೇಶದಿಂದ ಕೇಂದ್ರ ಸರಕಾರ ವಿಶೇಷ ಪ್ರಯತ್ನ ಮಾಡುವ ಮುಖಾಂತರ ಕೃಷಿಯಲ್ಲಿ ತಾಂತ್ರಿಕತೆ ಹೆಚ್ಚಿಸಿದೆ. ಕೃಷಿ ಬಜೆಟ್‌ನ್ನು ಹಿಂದಿನ ವರ್ಷಗಳಿಗಿಂತ ೫ ಪಟ್ಟು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದು ಚೌಟ ಹೇಳಿದರು.ರಬ್ಬರ್ ಮಂಡಳಿ ಜತೆ ಶೀಘ್ರ ಚರ್ಚೆ ನಡೆಸಿ ಕೃಷಿಕರಿಗೆ ಒಂದೇ ರೀತಿಯ ಬೆಲೆ ಸಿಗುವ ಬಗ್ಗೆ ಕಾಳಜಿ ವಹಿಸುವುದಾಗಿ ಬೃಜೇಶ್ ಚೌಟ ಹೇಳಿದರು.ಅಡಕೆ ಹಳದಿ ರೋಗ ಅಧ್ಯಯನದ ವರದಿ ಕೇಂದ್ರಕ್ಕೆ ತಲುಪಿದ ಬಳಿಕ ಜಿಲ್ಲೆಗೆ ಕೇಂದ್ರ ಕೃಷಿ ಸಚಿವರು ಪ್ರವಾಸ ಕೈಗೊಳ್ಳಲಿದ್ದು ಅವರ ಜತೆ ಕೃಷಿಕರ ಸಂವಾದ ಹಮ್ಮಿಕೊಳ್ಳಲಿರುವುದಾಗಿ ಚೌಟ ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ರಬ್ಬರ್ ಬೆಳೆಗಾರರ ಸಮಸ್ಯೆ ಕುರಿತು ಹಾಗೂ ರಬ್ಬರ್‌ನ್ನು ಕೃಷಿ ಎಂದು ಪರಿಗಣಿಸುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.ವರದಿ ಬಿಡುಗಡೆಗೊಳಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಬೆಳ್ತಂಗಡಿಯಲ್ಲಿ ನಡೆಯುವ ಕಾರ್ಯಕ್ರಮಗಳು ಯಶಸ್ವಿ ಆಗುತ್ತವೆ. ಅಡಕೆ, ಕೃಷಿಕರ ಜೀವನ ಸಂಕಷ್ಟದಲ್ಲಿದೆ. ರಬ್ಬರ್‌ಗೆ ಬೆಂಬಲ ಬೆಲೆ ಸರಕಾರ ನಿಗದಿಪಡಿಸುತ್ತಿಲ್ಲ. ರಬ್ಬರ್ ಸಂಘಗಳಿಗೆ ಸರಕಾರ ಬೆಂಬಲ ನೀಡಬೇಕು. ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಒಟ್ಟಾಗಿ ಈ ಬಗ್ಗೆ ಧ್ವನಿ ಎತ್ತಲಿದ್ದೇವೆ ಎಂದರು.ಕಾಂಞಗಾಡ್ ರಬ್ಬರ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿ ಎಂ. ಪಿ. ಪವಿತ್ರನ್ ನಂಬಿಯರ್ ‘ಭಾರತದಲ್ಲಿ ರಬ್ಬರ್ ಕೃಷಿಯ ಭವಿಷ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್ ಗುತ್ತಿಗಾರು, ಕರ್ನಾಟಕ ರಾಜ್ಯ ರಬ್ಬರು ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಾಜಿ ಯು.ವಿ., ಧರ್ಮಸ್ಥಳ ಎಸ್‌ಕೆಡಿಆರ್‌ಡಿಪಿ ಬಿ.ಸಿ. ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಮಂಗಳೂರು ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿ ಅಭಿವೃದ್ಧಿ ಅಧಿಕಾರಿ ಮಿನಿ ನಿನಾನ್, ಸುಳ್ಯ ರಬ್ಬರ್ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗಳೂರು ಕೃಪಾ ಸಂಸ್ಥೆಯ ಗೋಪಾಲಕೃಷ್ಣ ಭಟ್, ಸ್ವಾಗತ ಸಮಿತಿ ಕಾರ್ಯದರ್ಶಿ ರಾಜು ಶೆಟ್ಟಿ, ವಿಜಯಕೃಷ್ಣ ಸುಳ್ಯ ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ರಬ್ಬರ್ ಸೊಸೈಟಿಗಳ ನಿರ್ದೇಶಕರು, ರಬ್ಬರ್ ಕೃಷಿಕರು ಹಾಜರಿದ್ದರು.ಅಧ್ಯಯನ ವರದಿ ತಯಾರಿಸಿದ ಹಿರಿಯ ಅರ್ಥಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮಡಿ ಇವರನ್ನು ‘ಅಭಿನವ ಚಾಣಕ್ಯ’ ಬಿರುದು ನೀಡಿ ಗೌರವಿಸಲಾಯಿತು.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ. ಭಿಡೆ ಸ್ವಾಗತಿಸಿದರು. ಸಮ್ಮೇಳನ ಸಂಯೋಜಕ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ನಿರ್ಣಯ ಮಂಡನೆ ಮಾಡಿದರು. ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಪುತ್ತೂರು ವಂದಿಸಿದರು. ಡಾ. ಕುಮಾರ ಹೆಗ್ಡೆ ನಿರೂಪಿಸಿದರು.ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಮುಂದೆ ಮಂಡಿಸಿದ ನಿರ್ಣಯಗಳುರಬ್ಬರನ್ನು ಒಂದು ಕೃಷಿ ಉತ್ಪನ್ನವೆಂದು ಮಾನ್ಯತೆ ಮಾಡಬೇಕು, ಪ್ರಕೃತ ರಬ್ಬರು ವಾಣಿಜ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು ಇನ್ನು ಮುಂದೆ ಇದನ್ನು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸುಪರ್ದಿಗೆ ಸೇರಿಸಬೇಕು, ಆರ್‌ಎಸ್‌ಎಸ್ ಶೀಟ್ ರಬ್ಬರ್ ಗೆ ಕಿಲೋ ಒಂದರ ರು. 258 ನ್ನು ಕನಿಷ್ಠ ದರವೆಂದು ನಿಗದಿಪಡಿಸಬೇಕು ಹಾಗೂ ಕಾಂಪೌಂಡೆಡ್ ಅಥವಾ ಸಂಯುಕ್ತ ರಬ್ಬರಿನ ಆಮದಿನ ಸುಂಕವನ್ನು ಈಗಿರುವ 0 ಇಂದ ಶೇ.5 ಇರುವುದನ್ನು ಗರಿಷ್ಟ ಪ್ರಮಾಣಕ್ಕೆ ಏರಿಸಿ ಆಮದು ಬೆಲೆ ನಿರ್ಧರಿಸಬೇಕು.ರಾಜ್ಯ ಸರ್ಕಾರದ ಮುಂದೆ ಮಂಡಿಸಿರುವ ನಿರ್ಣಯಗಳು:
-ರಬ್ಬರು ಕೃಷಿಯನ್ನು ತೋಟಗಾರಿಕಾ ಬೆಳೆಯೆಂದು ಪರಿಗಣಿಸಿ ಅದನ್ನು ಆ ಇಲಾಖೆಯ ಸುಪರ್ದಿಗೆ ಸೇರಿಸಬೇಕು. ರಬ್ಬರಿಗೆ ಕನಿಷ್ಟ ಕಿಲೋ ಒಂದರ ರು. 258ರ ಬೆಂಬಲ ಬೆಲೆ ನಿಗದಿ ಮಾಡಿ ಬೆಳೆಗಾರರಿಗೆ ದೊರಕುವಂತೆ ಕ್ರಮಕೈಗೊಳ್ಳಬೇಕು. ರಬ್ಬರು ಕೃಷಿಗೂ ಹವಾಮಾನ ಆದರಿತ ವಿಮೆ ಸೌಲಭ್ಯ ಒದಗಿಸಿಕೊಡಬೇಕು ಹಾಗೂ ರಾಜ್ಯದಲ್ಲಿ ರಬ್ಬರು ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ ಆಗಬೇಕು.