ಕೋರ್ಟ ಆದೇಶ ಬಾರದೇ ಈ ರೀತಿ ಮಾಡುವುದು ತಪ್ಪು. ಆದಾಗ್ಯೂ ಗುದ್ನೇಶ್ವರ ದೇವಸ್ಥಾನ ಜಾಗದಲ್ಲಿ ಸ್ಥಳೀಯ ಶಾಸಕ ಬಸವರಾಜ ರಾಯರಡ್ಡಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವುದು ತಪ್ಪು
ಕುಕನೂರು: ಗುದ್ನೇಪ್ಪನಮಠ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ನೋವಿನ ಸಂಗತಿ. ಗುದ್ನೇಶ್ವರ ಮಠದ ಜಾಗ ಉಳಿಯಬೇಕು ಎಂದು ಗದಗ ಜಿಲ್ಲೆಯ ನೀಲಗುಂದ ಗ್ರಾಮದ ಗುದ್ನೇಶ್ವರಸ್ವಾಮಿ ಭಕ್ತ ಪ್ರಭು ಅಂಗಡಿ ಹೇಳಿದರು.
ಪಟ್ಟಣದ ಗುದ್ನೇಪ್ಪನಮಠದಲ್ಲಿ ಗದಗ ಜಿಲ್ಲೆಯ ಮಲ್ಲಿಗವಾಡ ಹಾಗೂ ನೀಲಗುಂದ ಗ್ರಾಮದ ಗುದ್ನೇಶ್ವರ ಸ್ವಾಮಿ ಭಕ್ತರಿಂದ ಜರುಗಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಗುದ್ನೇಶ್ವರ ಜಾಗದ ಕುರಿತು ಸ್ಥಳೀಯರು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟಿನಿಂದ ಇನ್ನೂ ಯಾವುದೇ ಆದೇಶ ಬಂದಿಲ್ಲ. ಈ ಮಧ್ಯೆ ಅಧಿಕಾರಿ ವರ್ಗದವರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಳತೆ ಮಾಡುವುದು, ವೀಕ್ಷಣೆ ಮಾಡುವುದು ಮಾಡುತ್ತಿದ್ದಾರೆ. ಕೋರ್ಟ ಆದೇಶ ಬಾರದೇ ಈ ರೀತಿ ಮಾಡುವುದು ತಪ್ಪು. ಆದಾಗ್ಯೂ ಗುದ್ನೇಶ್ವರ ದೇವಸ್ಥಾನ ಜಾಗದಲ್ಲಿ ಸ್ಥಳೀಯ ಶಾಸಕ ಬಸವರಾಜ ರಾಯರಡ್ಡಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವುದು ತಪ್ಪು. ಬೇಕಿದ್ದರೆ ಬೇರೆ ಕಡೆ ಜಾಗ ಹುಡುಕಿ ಮಾಡಲಿ, ಇಲ್ಲಿ ಬೇಡ. ಶಾಸಕ ರಾಯರಡ್ಡಿ ಕಾನೂನು ಪ್ರಕಾರ ಕೆಲಸ ಮಾಡಲಿ. ನಾವು ಭಕ್ತರೂ ಸಹ ಗುದ್ನೇಶ್ವರ ಮಠದ ಜಾಗ ಉಳಿಯಲಿ ಎಂದು ಕೋರ್ಟಿಗೆ ಹೋಗುತ್ತೇವೆ. ಬುತ್ತಿ ಕಟ್ಟಿಕೊಂಡು ಹೈಕೋರ್ಟಿಗೆ ಹೋಗಿ ಗುದ್ನೇಶ್ವರ ಮಠದ ಜಾಗದ ಉಳಿವಿಗೆ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಲ್ಲಿಗವಾಡದ ವಿರುಪಾಕ್ಷಪ್ಪ ಭಾವಿಕಟ್ಟಿ ಮಾತನಾಡಿ, ಗುದ್ನೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಭಕ್ತರಿದ್ದು, ಬಹುದೊಡ್ಡ ಜಾತ್ರೆ ಸಹ ಜರುಗುತ್ತದೆ. ಸಂಪ್ರದಾಯದಿಂದ ಜರುಗುತ್ತಾ ಬಂದಿರುವ ಜಾತ್ರೆಯ ಉಳಿವಿಗೆ ಗುದ್ನೇಶ್ವರ ಮಠದ ಜಾಗದಲ್ಲಿ ಸರ್ಕಾರಿ ಕಟ್ಟಡ ಆಗಬಾರದು ಎಂದರು.
ಮಲ್ಲಿಗವಾಡದ ರಾಮಣ್ಣ ಮೆಣಸಿನಕಾಯಿ ಮಾತನಾಡಿ, ಗುದ್ನೇಶ್ವರ ಮಠದ ಜಾಗ 211ಎಕರೆ ಇದ್ದು, ಆ ಜಾಗ ಸಂಪೂರ್ಣ ಉಳಿಯಬೇಕು. ಭಕ್ತರಿಗೆ ಹಾಗೂ ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವ ಕೆಲಸ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಮಾಡಬಾರದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.