ಕಾಂತರಾಜು ವರದಿ ಅನುಷ್ಠಾನವಾಗಿದ್ದರೆ ಹಿಂದುಳಿದ ವರ್ಗಗಳಿಗೆ ಶಕ್ತಿ ಬರುತ್ತಿತ್ತು: ಡಾ.ಯತೀಂದ್ರ ಸಿದ್ದರಾಮಯ್ಯ

KannadaprabhaNewsNetwork |  
Published : Jun 16, 2025, 03:06 AM ISTUpdated : Jun 16, 2025, 01:17 PM IST
15ಕೆಎಂಎನ್ ಡಿ17 | Kannada Prabha

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಶೋಷಿತರು ಹಾಗೂ ಹಿಂದುಳಿದವರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹಿಂದುಳಿದ ವರ್ಗದ ಜನರು ಕೇವಲ ವೋಟ್ ಬ್ಯಾಂಕ್ ಆಗದೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ತಮ್ಮ ಹಕ್ಕುಗಳನ್ನು ಕೇಳಿ ಪಡೆಯುವಂತಾಗಬೇಕು.

 ಮಂಡ್ಯ :  ಕಾಂತರಾಜು ಅವರ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಬಿಡುಗಡೆಯಾಗಿ ಅನುಷ್ಠಾನವಾಗಿದ್ದರೆ ಹಿಂದುಳಿದ ವರ್ಗಗಳಿಗೆ ಶಕ್ತಿ ಬರುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಕರಡಿಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ಪುಟ್ಟಸ್ವಾಮಿಗೌಡರು ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಕಾಂತರಾಜು ವರದಿ ಅನುಷ್ಠಾನವಾಗಬೇಕಿತ್ತು. ಇದರಿಂದ ಹಿಂದುಳಿದ ವರ್ಗದ ಎಲ್ಲರಿಗೂ ಮೀಸಲಾತಿ ಸಿಗುತ್ತಿತ್ತು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಶೋಷಿತರು ಹಾಗೂ ಹಿಂದುಳಿದವರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹಿಂದುಳಿದ ವರ್ಗದ ಜನರು ಕೇವಲ ವೋಟ್ ಬ್ಯಾಂಕ್ ಆಗದೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ತಮ್ಮ ಹಕ್ಕುಗಳನ್ನು ಕೇಳಿ ಪಡೆಯುವಂತಾಗಬೇಕು ಎಂದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಶಾಸಕಾಂಗದಲ್ಲಿ ಮೀಸಲಾತಿ ಇರುವುದರಿಂದ ಹಿಂದುಳಿದವರು ಹಾಗೂ ಶೋಷಿತ ಸಮುದಾಯದವರು ಶಾಸಕರಾಗಲು ಸಾಧ್ಯವಾಗಿದೆ. ಹಿಂದುಳಿದ ವರ್ಗದವರ ಪರ ಹೋರಾಟ ಮಾಡುತ್ತಿರುವವರಿಗೆ ಬೆಂಬಲ ಹಾಗೂ ಸಹಕಾರ ಕೊಡಬೇಕು ಎಂದರು.

ಕಾರ್ಯಾಂಗ, ನ್ಯಾಯಾಂಗ, ಬಿಜಿನೆಸ್, ಮಾಧ್ಯಮ, ಹತ್ತು ಶ್ರೀಮಂತರ ಪಟ್ಟಿಯೂ ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ಮೇಲ್ವರ್ಗದವರೆ ಇದ್ದು, ಎಲ್ಲಾ ಅಧಿಕಾರಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳು ಶಿಕ್ಷಣ ಪಡೆದರೆ ಮಾತ್ರ ಇವರಿಗೆ ಪೈಪೋಟಿ ನೀಡುವ ಜೊತೆಗೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.

ಜನರಿಗೆ ಶುದ್ಧ ಕುಡಿಯುವ ನೀರಿನ ಅಗತ್ಯವಿದೆ. ಸ್ವಾರ್ಥ ಸೇವೆಯಲ್ಲಿ ಮುಳುಗಿರುವ ಇಂದಿನ ಜನರ ನಡುವೆ ಪುಟ್ಟಸ್ವಾಮಿಯವರು ಸ್ವಂತ ಖರ್ಚಿನಲ್ಲಿ ತಮ್ಮೂರಿನ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ನೀರಿನ ಘಟಕ ತೆರೆದಿದ್ದಾರೆ. ಇದರ ಪ್ರಯೋಜನ ಪಡೆಯಿರಿ ಎಂದರು.

ಡಾ.ರಾಮ ಮನೋಹರ ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಮಾತನಾಡಿ, 2029ಕ್ಕೆ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಬೇಕು. 2028ಕ್ಕೆ ಸಿದ್ದರಾಮಯ್ಯರ ಉತ್ತರಾಧಿಕಾರಿಯಾಗಿ ಪುತ್ರ ಡಾ.ಯತೀಂದ್ರ ಅವರು ರಾಜ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಡ್ಯಾಂ ಕಟ್ಟಿದ್ದಾರೆ. ಸಾಮಾಜಿಕ ಹಾಗೂ ಸಂವಿಧಾನದ ಡ್ಯಾಂಗಳು ರಾಜ್ಯದಲ್ಲಿ ಉಳಿಯಬೇಕಾದರೆ ಅದರ ನಾಯಕತ್ವವನ್ನು ಯತೀಂದ್ರ ವಹಿಸಬೇಕಾಗುತ್ತದೆ ಎಂದರು.

ಪುಟ್ಟಸ್ವಾಮಿಗೌಡ ಸ್ವಂತ ಗಳಿಕೆ ಹಣ ತಂದು ಶುದ್ಧ ಕುಡಿಯುವ ನೀರಿನ ಘಟಕ ಮಾಡಿ ಊರಿನ ಮಣ್ಣಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಮುಂದೆ ಜಿಪಂ ಸದಸ್ಯರಾಗಲು ಬೆಂಬಲಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಶಾಸಕ ಡಿ.ರವಿಶಂಕರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್. ಸುರೇಶ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಜೆ.ಗೋಪಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ಪುಟ್ಟಸ್ವಾಮಿಗೌಡ, ಮಂಜೇಗೌಡ ಶಶಿಧರ್, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ