ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ ರಿಪೇರಿ ಆರಂಭ

KannadaprabhaNewsNetwork |  
Published : Jun 16, 2025, 03:05 AM IST
ಚಿತ್ರ :೧೫ಎಚ್‌ಬಿಎಚ್೧ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುತ್ತಿರುವುದು. | Kannada Prabha

ಸಾರಾಂಶ

ತಾಲೂಕಿನ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿಗೆ ಈ ಹಿಂದಿನ ಶಾಸಕ ಎಸ್.ಭೀಮನಾಯ್ಕ ಕಾಯ್ದಿರಿಸಿದ್ದ ₹೪.೨೩ಕೋಟಿ ಅನುದಾನ ಕೊನೆಗೆ ಸಾರ್ಥಕವಾದಂತಾಗಿದೆ.

ಬಲ ನೀಡಿದ ಭೀಮನಾಯ್ಕ ಅನುದಾನ: ಅಚ್ಚುಕಟ್ಟು ರೈತರ ಸಂತಸಸುರೇಶ ಯಳಕಪ್ಪನವರಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿತಾಲೂಕಿನ ಮಾಲವಿ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿಗೆ ಈ ಹಿಂದಿನ ಶಾಸಕ ಎಸ್.ಭೀಮನಾಯ್ಕ ಕಾಯ್ದಿರಿಸಿದ್ದ ₹೪.೨೩ಕೋಟಿ ಅನುದಾನ ಕೊನೆಗೆ ಸಾರ್ಥಕವಾದಂತಾಗಿದೆ.ಮಳೆ ಮಧ್ಯದಲ್ಲಿಯೇ ಕಾಮಗಾರಿ ಆರಂಭಗೊಂಡಿದ್ದು, ಅಚ್ಚುಕಟ್ಟು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸಿಎಂ ಸಿದ್ದರಾಮಯ್ಯನವರು ಕಳೆದ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ₹೧೬೫ ಕೋಟಿ ಅನುದಾನ ಒದಗಿಸಿ, ಹೂವಿನಹಡಗಲಿಯ ರಾಜವಾಳದಿಂದ ಪೈಪ್‌ಲೈನ್ ಮೂಲಕ ಜಲಾಶಯ ತುಂಬಿಸಲು ಅನುದಾನ ನೀಡಿದ್ದರು. ಅಂದಿನ ಶಾಸಕ ಎಸ್.ಭೀಮನಾಯ್ಕ ಅನುದಾನವನ್ನು ಸದ್ಬಳಕೆ ಮಾಡುವಲ್ಲಿ ಯಶಸ್ವಿಯಾಗಿ ಮಾಲವಿ ಜಲಾಶಯಕ್ಕೆ ನೀರು ತುಂಬಿಸುವ ಮೂಲಕ ರೈತರ ದಶಕಗಳ ಕನಸನ್ನು ನನಸಾಗಿಸಿದರು. ಜಲಾಶಯದ ತುಂಬಿದ ನಂತರ ಗೇಟ್‌ಗಳ ಸೋರಿಕೆ ರೈತರನ್ನು ಚಿಂತೆಗೀಡು ಮಾಡಿತ್ತು. ಇದನ್ನರಿತ ಭೀಮನಾಯ್ಕ ಕೂಡಲೇ ₹೪.೨೩ ಕೋಟಿ ಅನುದಾನವನ್ನು ಗೇಟ್ ರಿಪೇರಿ ಮಾಡಲು ಕಾಯ್ದಿರಿಸಿದ್ದರು. ಹಲವಾರು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿ ಈಗ ಆರಂಭಗೊಂಡಿರುವುದರಿಂದ ಎಲ್ಲರಲ್ಲೂ ಸಂತಸ ಮನೆಮಾಡಿದೆ. ಸೋರಿಕೆ ತಡೆಯಿಂದಾಗಿ ೨ ಟಿಎಂಸಿ ನೀರು ಸಂಗ್ರಹಣೆ ಮಾಡಬಹುದು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಜಲಾಶಯದಲ್ಲಿ ೧೦ ಗೇಟುಗಳ ದುರಸ್ತಿಗೆ ಇದೀಗ ಕಾರ್ಯ ಆರಂಭವಾಗಿದೆ. ಮುಂಗಾರು ಮಳೆ ಉತ್ತಮವಾಗಿ ಆಗುವ ನಿರೀಕ್ಷೆ ಹೆಚ್ಚಾಗಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿರುವ ಹಿನ್ನೆಲೆ ಇದೀಗ ಜಲಾಶಯದ ಗೇಟ್‌ಗಳ ಪುನರ್ ನಿರ್ಮಾಣ ತುರ್ತು ಅಗತ್ಯವೆನಿಸಿದೆ. ದುರಸ್ತಿ ಕಾರ್ಯಕ್ಕೆ ಪೂರಕವಾಗಿ ಜಲಾಶಯದ ಗೇಟ್‌ಗಳ ಬಳಿ ನೀರು ಸಂಗ್ರಹಣೆಗೊಳ್ಳದಂತೆ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಸಮೃದ್ಧ ಮಳೆಯಿಂದಾಗಿ ಈಗಾಗಲೇ ತಡೆಗೋಡೆಗಳನ್ನೂ ದಾಟಿ ಹರಿಯುವಷ್ಟು ನೀರು ಸಂಗ್ರಹವಾಗಿದೆ. ಒಟ್ಟು ೧೬ ಸಾವಿರ ಹೆ.ಪ್ರದೇಶಕ್ಕೆ ನೇರವಾಗಿ ನೀರುಣಿಸುವ ಮತ್ತು ೫೦ ಸಾವಿರ ಎಕರೆ ಪ್ರದೇಶದಲ್ಲಿ ಅಂತರ್ಜಲ ಹೆಚ್ಚುವ ಮಹದಾಸೆಗೆ ರೆಕ್ಕೆ ಬಂದಂತಾಗಿದೆ. ಬೃಹತ್ ಯಂತ್ರಗಳ ಮೂಲಕ ಗೇಟ್‌ಗಳ ದುರಸ್ತಿ ಕಾರ್ಯವನ್ನು ನೂರಾರು ರೈತರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.ಬೆಂಗಳೂರಿನ ಬೇತಾಳ್ ಕಂಪನಿಯ ಪರಿಣಿತರು ರಿಪೇರಿ ಕಾರ್ಯದಲ್ಲಿ ತೊಡಗಿದ್ದಾರೆ. ಜಲಾಶಯದ ೧೦ನೇ ಗೇಟನ್ನು ಕ್ರೈನ್ ಬಳಸಿ ಕೆಳಗಿಳಿಸಲಾಗಿದೆ. ಗೇಟ್‌ಗಳ ಮುಂಭಾಗದಲ್ಲಿ ಅಧಿಕ ಪ್ರಮಾಣದ ತೇವಾಂಶದಿಂದಾಗಿ ಬೃಹತ್ ಯಂತ್ರಗಳ ನಿರ್ವಹಣೆ ಕೊಂಚ ತೊಡಕಾಗುತ್ತಿದ್ದರೂ ಸವಾಲಾಗಿ ಸ್ವೀಕರಿಸಲಾಗಿದೆ. ಗೇಟ್‌ಗಳ ಮುಂಭಾಗದಲ್ಲಿ ಕ್ರೈನ್‌ಗಳು ಕುಸಿಯದಂತೆ ಗ್ರಾವೆಲ್ ಹಾಕಿಕೊಳ್ಳಲಾಗಿದೆ. ಗೇಟ್‌ಗಳನ್ನು ಒಂದೊಂದಾಗಿ ಕೆಳಗಿಸಿ, ಅವುಗಳ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವ ಯಂತ್ರಗಳನ್ನೂ ಬದಲಾಯಿಸುವುದು ಯೋಜನೆಯಲ್ಲಿದೆ.

ಗೇಟ್‌ಗಳ ರಬ್ಬರ್ ಸೀಲ್, ರೋಲರ್ಸ್‌, ಸ್ಲಿಂಗ್ ರೋಪರ್, ಬ್ರೇಕರ್‌ಗಳು, ಕೆಳಭಾಗದಲ್ಲಿ ಗೇಟ್‌ಗಳಿಂದ ಸೋರಿಕೆಯಾಗದಂತೆ ಸ್ಯಾಂಡ್ ಬ್ಲಾಸ್ಟಿಂಗ್ ಅಳವಡಿಕೆ, ಕಾಲುವೆಗಳ ಹೆಡ್ ರೆಗ್ಯುಲೇಟರ್‌ಗಳನ್ನು ಕೂಡ ಬದಲಾಯಿಸಲಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ